ಲೈನ್ ಮ್ಯಾನ್‌ ದಿನಾಚರಣೆ ಉದ್ಘಾಟಿಸಿದ ಶಾಸಕ ಎಚ್.ಪಿ. ಸ್ವರೂಪ್

04_HSN_05
Published on

ಹಾಸನ: ಲೈನ್ ಮ್ಯಾನ್‌ಗಳು ತಮ್ಮ ಜೀವನವನ್ನೆ ಹೊತ್ತೆಯಾಗಿ ಇಟ್ಟು ಹಗಲು-ರಾತ್ರಿ ಎನ್ನದೆ ಜನಸಾಮಾನ್ಯರಿಗೆ ಬೆಳಕು ನೀಡುವ ದೃಷ್ಟಿಯಿಂದ ಕೆಲಸ ಮಾಡುತ್ತಾರೆ, ಇಂತಹ ಕೆಲಸಗಾರರಿಗೆ ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ನೀಡಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಸೆಸ್ಕಂ ಕಚೇರಿಯ ಆವರಣದಲ್ಲಿ ಸೋಮವಾರ ಪ್ರಥಮ ಬಾರಿಗೆ ಸೆಸ್ಕಂ ಮತ್ತು ಕೆಪಿಟಿಸಿಎಲ್ ವಿದ್ಯುತ್ ಲೈನ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.
ಜಿಲ್ಲೆ ಮತ್ತು ರಾಜ್ಯದಲ್ಲಿ ಲೈನ್ ಮ್ಯಾನ್‌ಗಳ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಸರ್ಕಾರ ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಬೇಕು. ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಅವರು ಇಂಧನ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಲೈನ್ ಮ್ಯಾನ್‌ಗಳ ನೇಮಕ ಮಾಡುವ ಮೂಲಕ ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದರು ಎಂದರು.
ತಮ್ಮ ಕೆಲಸದ ಸಂದರ್ಭದಲ್ಲಿ ಅನೇಕರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಚಿಕ್ಕನಾಯಕನಹಳ್ಳಿ ನಿವಾಸಿ ರಂಗನಾಥ್ ಅವರು ಸಾವನ್ನಪ್ಪಿದ್ದರು ಅವರ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಪರಿಹಾರವನ್ನ ನೀಡಬೇಕು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿರುವ ನೌಕರರು ಬಹಳಷ್ಟು ಜನರು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಿ. ಇಲ್ಲ ಅಂದರೆ ಅಪಾಯ ಕಟ್ಟಿಟ್ಟ ಬುಟ್ಟಿಯಾಗಿರುತ್ತದೆ. ಆದ್ದರಿಂದ ತಾವು ಕೆಲಸ ಮಾಡುವಾಗ ಹೆಚ್ಚಿನ ನಿಗವಹಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಚಿಕ್ಕನಾಯಕನಹಳ್ಳಿ ನಿವಾಸಿ ರಂಗನಾಥ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನ ಆಚರಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಹೇಮರಾಜ್, ಅರ್ಜುನ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net