ಲೈಂಗಿಕ ದೌರ್ಜನ್ಯ ಪ್ರಕರಣ ಸಂಸದ ಪ್ರಜ್ವಲ್ ರೇವಣ್ಣನ್ನು ಕೂಡಲೇ ಬಂಧಿಸುವಂತೆ ಒತ್ತಾಯ

ಲೈಂಗಿಕ ದೌರ್ಜನ್ಯ ಪ್ರಕರಣ ಸಂಸದ ಪ್ರಜ್ವಲ್ ರೇವಣ್ಣನ್ನು ಕೂಡಲೇ ಬಂಧಿಸುವಂತೆ ಒತ್ತಾಯ
Published on

ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪದಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ವಕೀಲ ವಿನಯ್‌ಗಾಂಧಿ ಒತ್ತಾಯಿಸಿದರು.
ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ನೂರಾರು ಹೆಣ್ಣು ಮಕ್ಕಳ ಮಾನ ಮರ್ಯಾದೆ ಎಲ್ಲಾ ಕಡೆ ಹರಾಜಾಗಿದೆ. ಆದರೂ ಈವರೆಗೂ ಗುರುತರ ಆರೋಪ ಎದುರಿಸುತ್ತಿರುವ ವ್ಯಕ್ತಿ ಬಂಧನ ಆಗಿಲ್ಲ. ಕೂಡಲೇ ಬಂಧಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಜ್ವಲ್ ವಿರುದ್ಧ ಪ್ರತಿಭಟನೆ ಮಾಡಿದವರಿಂದ ಮನವಿ ಸ್ವೀಕರಿಸುವಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಆಡಿರುವ ಒಂದು ಮಾತನ್ನೇ ಮುಂದಿಟ್ಟು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿ ಅವರ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಖಂಡಿಸಿದರು. ದೇಶವೇ ತಲೆ ತಗ್ಗಿಸುವ ಘಟನೆ ಅವರ ಕುಟುಂಬ ಸದಸ್ಯರಿಂದ ಆಗಿದೆ. ಆದರೂ ಯಾವ ಮುಖಹೊತ್ತು ಅವರು ಸಾರ್ವಜನಿಕವಾಗಿ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಡಿಸಿ ಅವರ ಬಗ್ಗೆ ಕುಮಾರಸ್ವಾಮಿ ಅವರು ದುರಹಂಕಾರದ ಮಾತನಾಡಿರುವುದು ಖಂಡನೀಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರ ಬಗ್ಗೆಯೂ ಕುಮಾರಸ್ವಾಮಿ ಅವರು ವ್ಯಂಗ್ಯವಾಗಿ ಪ್ರತಿಕ್ರ್ರಿಯಿಸಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಮುನಿಸ್ವಾಮಿ, ಜಿ.ಎನ್. ಸುರೇಶ್, ನಗರಸಭೆ ಮಾಜಿ ಸದಸ್ಯ ಆಲೀಂ ಪಾಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net