

ಹಾಸನ: ಯಾವುದೇ ಬಗೆಯ ಲೈಂಗಿಕ ದೌರ್ಜನ್ಯ ನಡೆದಾಗ ಹಿಂಜರಿಯದೆ ದೂರು ದಾಖಲಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪೋಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿಗಳು ಅರಿಯುವುದು ಅತ್ಯಗತ್ಯ. ವಯೋಸಹಜ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ ಹದಿನೆಂಟು ವಯಸ್ಸು ದಾಟುವ ಮುನ್ನವೇ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮುಂದೆ ಕಾನೂನಾತ್ಮಕವಾಗಿ ಮತ್ತು ದೈಹಿಕವಾಗಿ ಹಲವು ರೀತಿಯ ಸಮಸ್ಯೆ ಎದುರಿಸುವ ಸನ್ನಿವೇಶ ಎದುರಾಗಲಿದೆ ಎಂದು ತಿಳಿಸಿದರು.
ಭನ್ವರಿ ದೇವಿ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕಾನೂನಿನ ಪ್ರಕಾರ ಹೋರಾಟ ನಡೆಸಿದ್ದರಿಂದ ವಿಶಾಖ ಮಾರ್ಗಸೂಚಿ’ ಜಾರಿಗೆ ಬಂತು. ಇದು ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ಪ್ರಾಧ್ಯಾಪಕ ಡಾ.ಇಂದಿರಾ ಬಹದ್ದೂರ್, ಡಾ.ಜಿ.ಕೆ.ಕಲಾವತಿ ಉಪಸ್ಥಿತರಿದ್ದರು.