ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಶಿಕ್ಷೆ

Published on

ಚಾಮರಾಜನಗರ: ಅಪ್ರಾಪ್ತೆಯನ್ನು ಪ್ರೀತಿ ಮಾಡುವಂತೆ ಪುಸಲಾಯಿಸಿ ವಿವಾಹವಾಗಿ ಲೈಂಗಿಕ ದೌರ್ಜನ್ಯವೆಸಗಿದವನಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ಇದಕ್ಕೆ ಸಹಾಯ ಮಾಡಿದ್ದ ಸ್ನೇಹಿತನಿಗೆ 3 ವರ್ಷ ಶಿಕ್ಷೆ ವಿಧಿಸಿ ಅಧಿಕ ಜಿಲ್ಲಾ ಮತ್ತು ಸತ್ರ ಎ್ಟಿಎಸ್‌ಸಿ-1 ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ನಿವಾಸಿಗಳಾದ ಹೇಮಂತ್‌ಕುಮಾರ್ ಮತ್ತು ಈತನ ಸ್ನೇಹಿತ ಅರುಣ್‌ಕುಮಾರ್ ಶಿಕ್ಷೆಗೊಳಗಾದವರು. ಹೇಮಂತ್‌ಕುಮಾರ್ 16 ವರ್ಷದ ಬಾಲಕಿಯನ್ನು ಪ್ರೀತಿ ಮಾಡುವಂತೆ ಪುಸಲಾಯಿಸಿದ್ದ. ಒತ್ತಾಯ ಮಾಡಿ ಪ್ರೀತಿಸಿ ಅಪಹರಿಸಿ ರೈಲಿನಲ್ಲಿ ಕರೆದುಕೊಂಡು ಹೋಗಿ ರೈಲಿನಲ್ಲೇ ಬಾಲ್ಯ ವಿವಾಹ ಮಾಡಿಕೊಂಡಿದ್ದ. ಇವರನ್ನು ಸ್ನೇಹಿತನಾದ ಅರುಣ್‌ಕುಮಾರ್ ತನ್ನ ಇನ್ನೊಬ್ಬ ಸ್ನೇಹಿತನ ಬೆಂಗಳೂರಿನ ಮನೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದ. ಅಲ್ಲಿ ಬಾಲಕಿಯನ್ನು ಮದುವೆಯಾಗಿದ್ದ ಹೇಮಂತ್‌ಕುಮಾರ್ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಜೆ.ಕೃಷ್ಣ ಹೇಮಂತ್‌ಕುಮಾರ್‌ಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ. ದಂಡ, ಅರುಣ್‌ಕುಮಾರ್‌ಗೆ 3 ವರ್ಷ ಸಾಧಾರಣ ಶಿಕ್ಷೆ ಮತ್ತು 5 ಸಾವಿರ ರೂ.ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ 40 ಸಾವಿರ ರೂ. ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 4 ಲಕ್ಷ ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರ ನೀಡಬೇಕೆಂದು ಆದೇಶಿದ್ದಾರೆ. ನೊಂದ ಬಾಲಕಿಯ ಪರವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net