

ಹಾಸನ: ಅಡುಗೆ ಮನೆಯಿಂದ ಬಾಹ್ಯಾಕಾಶದ ವರೆಗೆ ವಿವಿಧ ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ಸ್ತ್ರೀಯರಿಗೆ ಬುನಾದಿ ಕುಟುಂಬವಾಗಿರುತ್ತದೆ ಎಂದು ಬೆಂಗಳೂರಿನ ನ್ಯಾಷನಲ್ ಪದವಿ ಪೂರ್ವ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಪಿ.ಪಲ್ಲವಿ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಲೇಖಕಿ ಕಮಲಮ್ಮನವರ ಕಾಲವೆಂಬ ಕನ್ನಡಿಯಲ್ಲಿ (ಕಥಾ ಸಂಕಲನ) ಹಾಗು ಮನೋಮಂಥನ (ಲೇಖನಗಳ ಸಂಗ್ರಹ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ತೊಟ್ಟಿಲನ್ನು ತೂಗುವ ಕೈಗಳು ಜಗತ್ತನ್ನು ತೂಗುತ್ತವೆ ಎಂಬುದಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸಿರುವುದೇ ಸಾಕ್ಷಿ. ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಕಮಲಮ್ಮನವರ ಸೂಕ್ಷ್ಮ ಪ್ರಜ್ಙೆಯನ್ನು ಅರಿಯಲು ಈ ಕೃತಿಗಳು ನೆರವಾಗುತ್ತವೆ ಎಂದು ಹೇಳಿದರು.
ಕಾಲವೆಂಬ ಕನ್ನಡಿ ಕೃತಿಯೂ ಪ್ರತಿಯೊಬ್ಬರ ಜೀವನದ ನೆನಪನ್ನು ಮೆಲುಕು ಹಾಕುತ್ತದೆ. ಮಹಿಳೆ ಯಾವುದರಲ್ಲೂ ಕಡಿಮೆಯಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾಳೆ. ಕುಟುಂಬವನ್ನು ಸುಲಲಿತವಾಗಿ ನಡೆಸುವ ಹೆಣ್ಣು ಏನ್ನನ್ನು ಬೇಕಾದರೂ ಸಾಧಿಸುತ್ತಾಳೆ. ಒಂದು ಮನೆಯ ಶ್ರೆಯೋಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಕುಟುಂಬವನ್ನು ಬಿಟ್ಟು ಹೋಗದೆ ಎಲ್ಲವನ್ನು ಸಾಧಿಸಿದಾಗ ಬದುಕು ಹಸನಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಥಾ ಸಂಕಲನದ ಕಾಲವೆಂಬ ಕನ್ನಡಿಯಲ್ಲಿ ಕೃತಿ ಕುರಿತು ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ ಅವರು ಸವಿಸ್ತಾರವಾಗಿ ಭಾಗಗಳನ್ನು ವಿವರಿಸಿದರು. ಇನ್ನು ಮನೋಮಂಥನ ಕೃತಿ ಕುರಿತು ಸಾಹಿತಿ ಗಿರಿರಾಜ್ ಹೊನ್ನಶೆಟ್ಟಿಹಳ್ಳಿ ವಿವರಿಸಿದರು.
ಇದೆ ವೇಳೆ ಎರಡು ಕೃತಿಕಾರರಾದ ಕಮಲಮ್ಮ, ಮುಖ್ಯ ಅಥಿತಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಸಾಹಿತಿ ಎನ್.ಎಲ್. ಚನ್ನೇಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣೇಗೌಡ, ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಡಾ. ಜಿ. ಚಂದ್ರಶೇಖರ್, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಉಪನ್ಯಾಸಕ ಮಹದೇವ್, ರತ್ನಮ್ಮ, ಸಹದೇವ್ ಇತರರು ಇದ್ದರು.