ಹಾಸನ: ಬಿಜೆಪಿ ಮುಖಂಡನಿಗೆ ಮಾನ ಮರ್ಯಾದೆ ಇದ್ದರೆ ಲೂಟಿ ಮಾಡುವುದನ್ನು ಬಿಟ್ಟು ಎರಡು ವರ್ಷದಿಂದ ಮುಂದೂಡುತ್ತಿರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಶಾಸಕ ಪ್ರೀತಂ ಗೌಡ ವಿರುದ್ಧ ಕಿಡಿಕಾರಿದರು.
ನಗರದ ಸಂಸದರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಐಡಿಯಾಲಜಿ ಗೊತ್ತಿಲ್ಲದಿರುವುದರಿಂದ ಹಾಸನ ನಗರದಲ್ಲಿ ಇಡೀ ಏಷ್ಯಾ ಖಂಡದಲ್ಲೇ ನಂಬರ್ ಒನ್ ಬಸ್ ನಿಲ್ದಾಣ ಮಾಡಿದ್ದೇವೆ. 200 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾಸ್ಪತ್ರೆ, ಕೋರ್ಟ್, ಚನ್ನಪಟ್ಟಣದಲ್ಲಿ ನಿವೇಶ ಮಾಡಿ ಹಂಚಿದ್ದು ಯಾರು? ಚನ್ನಪಟ್ಟಣ ಕೆರೆ ಮೇಲೆ ಬಸ್ ಓಡಾಡುವಂತೆ ಮಾಡಿರುವುದು ಯಾರು? ಐಡಿಯಾಲಜಿ ನನಗೆ ಅಷ್ಟು ಗೊತ್ತಿಲ್ಲ. ಅವರಿಗೆ ಎಷ್ಟೆಷ್ಟು, ಎಲ್ಲೆಲ್ಲಿ ಲೂಟಿ ಮಾಡಬೇಕು ಎಂಬ ಐಡಿಯಲಾಜಿ ಹೆಚ್ಚಿದೆ ಎಂದು ಕಿಡಿಕಾರಿದರು.
ಅವರಿಂದ ನಮಗೆ ಯಾವ ಗೌರವವೂ ಬೇಡ. ಅಭಿವೃದ್ಧಿ ಕೆಲಸ ಮಾಡಲಿ ಸಾಕು. ಪಂಚಯಾತ್ರೆ ಮಾಡುತ್ತಾರೆ. ಇಂತಹ ಯಾತ್ರೆ ಎಷ್ಟು ನೋಡಿಲ್ಲ. ಹಾಸನ ಕ್ಷೇತ್ರದಲ್ಲಿ ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಪ್ರೀತಂ ಗೌಡರ ಐಡಿಯಲಾಜಿ ಯಾವುದು ಎಂಬುದು ನನಗೆ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ಜನ ಉತ್ತರ ಕೊಡಲಿದ್ದಾರೆ. ಬಿಜೆಪಿ ಮುಖಂಡನಿಗೆ ಮಾನ ಮರ್ಯಾದೆ ಇದ್ದರೆ ಲೂಟಿ ಮಾಡುವುದನ್ನು ಮೊದಲು ಬಿಟ್ಟು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಿ ಎಂದರು.
ಅಧಿಕಾರಿಗಳು ದುಡ್ಡಿನ ಅಮಲಿನಲ್ಲಿ ಮೆರೆಯುತ್ತಿದ್ದಾರೆ. ಅವರಿಗೆ ದೇವರು ಶಿಕ್ಷೆ ಕೊಡುವ ಕಾಲ ಬರಲಿದೆ. ಒಂದು ತಿಂಗಳಿಂದ ಮಳೆಗೆ ಕೋಟ್ಯಂತರ ರೂ.ನಷ್ಟವಾಗಿದೆ. ಬೇಲೂರು, ಸಕಲೇಶಪುರ, ಆಲೂರು ಕಟ್ಟಾಯ ಹೋಬಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಪಾರ ಬೆಳೆ, ಮನೆಗಳು ಹಾನಿಯಾಗಿವೆ. ಅಧಿಕಾರಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂಕಷ್ಟದಿಂದ ರೈತರು ಇನ್ನೂ ಸುಧಾರಿಸಿಕೊಂಡಿಲ್ಲ. ಬೆನ್ನ ಹಿಂದೆಯೇ ಜುಲೈನಲ್ಲಿ ಶೇ.80 ರಷ್ಟು ಆಲೂ ಬೆಳೆ ನಾಶವಾಗಿದೆ. ಆಲೂ ಬಿತ್ತನೆ ಪ್ರಾರಂಭದಿಂದಲೂ ಮಳೆ ಬಂದು ಹಾನಿಯಾಗಿದೆ. ಶುಂಠಿ, ಮೆಕ್ಕೆ ಜೋಳಕ್ಕೂ ಹಾನಿಯಾಗಿದೆ. ರಸ್ತೆ ದುರಸ್ತಿಗೆ ಬಿಡಿಗಾಸು ಹಣ ನೀಡಿಲ್ಲ. ಶಾಲಾ ಕಟ್ಟಡಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ ಎಂದು ದೂರಿದರು.
ಹಿಂದಿನ ಜಿಲ್ಲಾಧಿಕಾರಿ ಸುಮಾರು 450 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದುವರೆಗೂ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೆಲವು ಏರಿಗಳು ಒಡೆಯುವ ಆತಂಕದಲ್ಲಿವೆ. ಪ್ರಧಾನಿ ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ಮಾಡಲಿ. ಕೂಡಲೇ ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಅತಿವೃಷ್ಟಿ ಅವಲೋಕನ ಮಾಡಿಸಿ ಪರಿಹಾರ ನೀಡಲಿ. ರಾಜ್ಯದ ಜನ ಅವರ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲಿ ಎಂದರು.