

ಚಿತ್ರದುರ್ಗ: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಲೂಟಿಗೆ ಮುಂದಾಗಿದ್ದು, ಸಿಎಂ ಕಲೆಕ್ಷನ್ ಮಾಸ್ಟರ್ ಎಂಬ ಬಿಜೆಪಿ ನಾಯಕರ ಆರೋಪ ಸತ್ಯಕ್ಕೆ ದೂರ. ಆಗಿದ್ದರೆ, ಸಾಬೀತು ಪಡಿಸಲಿ ಎಂದು ವಸತಿ ಸಚಿವ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ. ಶೇ 40ರಷ್ಟು ಕಮಿಷನ್ ತೆಗೆದುಕೊಂಡಿಲ್ಲ ಎಂಬುದನ್ನು ಆ ಪಕ್ಷದ ನಾಯಕರು ಸಾಬೀತು ಮಾಡದೆ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಇಂಡಿಯಾ ಒಕ್ಕೂಟ ಬೆಂಬಲಿಸುವ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಸ್ವಾಗತಾರ್ಹ. ಆದರೆ, ನಮ್ಮದೇ ಒರಿಜಿನಲ್ ಜನತಾದಳ. ನಾನೇ ಅದರ ಅಧ್ಯಕ್ಷ. ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಉಚ್ಛಾಟಿಸುವೆ ಎಂಬ ಅವರ ಮಾತು ಆ ಪಕ್ಷದ ಆಂತರಿಕ ವಿಚಾರ. ಈ ಕುರಿತು ಪ್ರತಿಕ್ರಿಯಿಸಲಾರೆ. ಮೈತ್ರಿ ವಿಚಾರದಲ್ಲಿ ಅಸಮಧಾನ ಇರುವವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದರು.
ಮಾಗಡಿಯಲ್ಲಿ ವಸತಿ ಸೌಕರ್ಯ ವಾಸಕ್ಕೆ ಯೋಗ್ಯವಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್, ರಾಜ್ಯದಲ್ಲಿ ಆಶ್ರಯ ಯೋಜನೆಯಡಿ 2015ರಿಂದ 20ವರೆಗೆ 2.38 ಲಕ್ಷ ಮನೆಗಳು ಘೋಷಣೆಯಾಗಿವೆ. ಆದರೆ, ಬಿಜೆಪಿ ಒಂದು ಮನೆ ನಿರ್ಮಿಸಿಕೊಟ್ಟಿಲ್ಲ. ಕೇಂದ್ರ ಸರ್ಕಾರ 1.5 ಲಕ್ಷ ರೂ. ಫಲಾನುಭವಿಗಳಿಗೆ ನೀಡಿ, ಜಿಎಸ್‌ಟಿ ಮೂಲಕ 1.3 ಲಕ್ಷ ರೂ. ಕಿತ್ತುಕೊಳ್ಳುತ್ತ್ತಿದೆ. ಇಂತಹ ಕೇಂದ್ರದ ಸಹಾಯಧನ ಯಾರಿಗೆ ಬೇಕು ಎಂದು ಕೆಂಡಾಮಂಡಲವಾದರು.
ವಸತಿ ಸೌಲಭ್ಯ ಕಲ್ಪಿಸಲು ಸಿಎಂ ಜೊತೆ ಚರ್ಚಿಸಿದ್ದು, ಒಂದು ತಿಂಗಳು ಸಮಯ ಕೇಳಿದ್ದಾರೆ. ಐದು ಗ್ಯಾರಂಟಿ ಜಾರಿಗೊಳಿಸಿರುವ ಸಿದ್ದರಾಮಯ್ಯ ಅವರಿಗೆ ಈ ಆರನೇ ಗ್ಯಾರಂಟಿ ಅಸಾಧ್ಯವೇನಲ್ಲ. ಅರ್ಹರಿಗೆ ಸೌಕರ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.