ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

17 vpt 1
Published on

ವಿರಾಜಪೇಟೆ: ಸಮೀಪದ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು. ಇದರ ಪ್ರಯುಕ್ತ ಜರುಗಿದ ಸಭಾ ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಭರತ್ ಚೆವೂರ್ ಉದ್ಘಾಟಿಸಿ ನೂತನ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಸಣ್ಣ ವಯಸ್ಸಿನಿಂದಲೇ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ಮಕ್ಕಳು ಶಿಸ್ತು, ಸಮಯಪ್ರಜ್ಞೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ನಾಗರಿಕರು ಆಗಬೇಕೆಂದು ಹೇಳಿದರು.

ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಶಾಲೆಯ ಕೀರ್ತಿ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನೂತನವಾಗಿ ರಚಿಸಲ್ಪಟ್ಟ ಶಾಲಾ ಗೀತೆಯನ್ನು ಅತಿಥಿಗಳು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥರಾದ ಪೂಜಾ ಸಜೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಮೌಲ್ಯಗಳನ್ನು ಪಾಲಿಸುವ ಒಂದು ಹಂತವಾಗಿದೆ. ಶಾಲೆಯಲ್ಲಿ ಜವಾಬ್ದಾರಿಯುತವಾಗಿ ಕಲಿತು ಸಮಾಜಕ್ಕೆ ಮಕ್ಕಳು ಕೊಡುಗೆಯನ್ನು ನೀಡಬೇಕು. ಪಾಲಕರು, ಹಿರಿಯರು ಗುರುಗಳ ಮಾತನ್ನು ಆಲಿಸಿ ಅವರಿಗೆ ಗೌರವವನ್ನು ನೀಡಬೇಕು. ಸಮಾಜದ ಹಿತಕ್ಕಾಗಿ ಶ್ರಮಿಸಬೇಕು ಎಂದರು.

ನೂತನ ವಿದ್ಯಾರ್ಥಿ ಪದಾಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಎಂದು ಕರೆ ಕೊಟ್ಟರು. ಈ ಶೈಕ್ಷಣಿಕ ಸಾಲಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯಶಿಕ್ಷಕಿ ಮೀರಾ ಪೂಣಚ್ಚ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ನೂತನ ವಿದ್ಯಾರ್ಥಿ ಪದಾಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net