

ಅರಸೀಕೆರೆ : ನಾಗರಿಕರ ಆರೋಗ್ಯ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹೇಳಿದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆವರಣದಲ್ಲಿ ನೂತನ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕೊಠಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರಹಾಗೂ ಗ್ರಾಮೀಣ ಜನರ ಆರೋಗ್ಯ ಕಾಪಡುವ ದೃಷ್ಟಿಯಿಂದ ನೆರವಿನ ಮಹಾಪೂರವನ್ನೇ ಹರಿಸಿದೆ.ಕೋವಿಡ್ ಸಂಕಷ್ಟ ಕಾಲದಲ್ಲಿ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡಂತೆ ಎರಡು ಪ್ರತ್ಯೇಕ ಪ್ಲಾಂಟ್ ಆರಂಭಿಸಲಾಗಿದೆ. ಅಲ್ಲದೇ ತುರ್ತು ಆಕ್ಸಿಜನ್ ಪೂರೈಕೆ ಕೊಠಡಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ಮತ್ತೊಂದು ಪ್ಲಾಂಟ್ ನೀಡಿರುವುದು ಜನಪರ ಕಾಳಜಿಗೆ ಸಾಕ್ಷಿಯಾಗಿದೆ.ಯಶಸ್ವಿನಿ ಅನುಷ್ಠಾನಕ್ಕೂ ಬಿಜೆಪಿ ಸರ್ಕಾರ ಬದ್ಧವಾಗಿದ್ದು ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹೊಸ ಕಾಯಿಲೆಗಳ ಆವಾಂತದಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಹೊಸ ಪ್ಲಾಂಟ್‌ಗಳ ಆಕ್ಸಿಜನ್ ಸೌಲಭ್ಯ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್,ನಿರ್ದೇಶಕ ಯಾದಾಪುರ ತೇಜಸ್,ಆಸ್ಪತ್ರೆ ಆಡಳಿತವೈದ್ಯಾಧಿಕಾರಿ ಡಾ.ಸುರೇಶ್, ಆರೋಗ್ಯ ರಕ್ಷಾ ಸಮಿತಿಯ ರಾಘವೇಂದ್ರ, ಮಂಜುನಾಥ್, ಮೇಘನಾಥನ್, ಚೇತನ್ ಜೈನ್, ವಾಸು, ಬಿಜೆಪಿ ನಗರಾಧ್ಯಕ್ಷ ಪುರುಷೋತ್ತಮ್ ಸೇರಿ ಇನ್ನಿತರರು ಹಾಜರಿದ್ದರು.