ಲಿಂಗಾಯತ ಸ್ವತಂತ್ರ, ಕಾಯಕ ಧರ್ಮ

28BK1
ಬಸವಕಲ್ಯಾಣ ಅನುಭವ ಮಂಟಪ ಪರಿಸರದ ವಚನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ತತ್ವ ಶಿಬಿರಕ್ಕೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಶ್ರೀ ಕೋರಣೇಶ್ವರ ಸ್ವಾಮೀಜಿ, ಸಂಜುಮಾರ ಸುಗರೆ, ರವೀಂದ್ರ ಕೋಳಕುರ, ಶಿವಕುಮಾರ ಶಟಗಾರ, ಆಕಾಶ ಖಂಡಾಳೆ, ಹಣಮಂತ ಧನಶೆಟ್ಟಿ ಇದ್ದರು.
Published on

ಬಸವಕಲ್ಯಾಣ: ಲಿಂಗಾಯತ ಧರ್ಮ ರಾಷ್ಟç ಧರ್ಮವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಸ್ಥಾಪನೆಗೊಂಡ ಸ್ವತಂತ್ರ, ಕಾಯಕ ಧರ್ಮವಾಗಿದೆ ಎಂದು ವಿಜಯಪುರದ ಸಾಹಿತಿ ಡಾ.ಜೆ.ಎಸ್.ಪಾಟೀಲ್​ ಹೇಳಿದರು.

ನಗರದ ಅನುಭವ ಮಂಟಪ ಪರಿಸರದ ವಚನ ಭವನದಲ್ಲಿ ಅನುಭವ ಮಂಟಪ ಹಾಗೂ ಶರಣ ಸಂಸ್ಕೃತಿ ವಿಚಾರ ವೇದಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ತತ್ವ ಶಿಬಿರದಲ್ಲಿ ಲಿಂಗಾಯತ ಧರ್ಮದ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗತಿ ವಿಷಯ ಕುರಿತು ಅನುಭಾವ ನೀಡಿದ ಅವರು, ಲಿಂಗಾಯತ ಧರ್ಮ ಸ್ಥಾಪಿಸಲು ಅಂದು ಬಸವಣ್ಣನವರು ಹಲವಾರು ವರ್ಷ ಚಳವಳಿ ನಡೆಸಬೇಕಾಯಿತು ಎಂದರು.

ವಚನ ಚಳವಳಿಯು ಅಂದಿನ ವೈದಿಕ ಧರ್ಮದಲ್ಲಿಯ ವಿಕೃತಿಗಳನ್ನು ವಿರೋಧಿಸಿ ಘಟಿಸಿದ ಸ್ವಾಭಿಮಾನಿ ಜನರ ಸಂಘಟಿತ ಆಂದೋಲನವಾಗಿದೆ. ಇತ್ತೀಚೆಗೆ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ತಾವೇ ಒಗ್ಗೂಡುವುದಿಲ್ಲ. ಇಂದು ಧರ್ಮ ಬೆಳವಣಿಗೆಗಾಗಿ ಒಗ್ಗಟ್ಟು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡ ಅನೇಕ ಸಂಘಟನೆಗಳು ಅತ್ಯಂತ ಅಪಾಯಕಾರಿಯಾಗಿವೆ. ಇಂತಹಗಳಿಂದ ಎಚ್ಚರಿಕೆಯಿಂದ ಲಿಂಗಾಯತ ಧರ್ಮದ ಬೆಳವಣಿಗೆಗೆ ಒಗ್ಗಟ್ಟು ಪ್ರದರ್ಶಿಸುವುದು ಅವಶ್ಯಕವಾಗಿದೆ. ಈ ಧರ್ಮದ ಕುರಿತು ನಿಸ್ವಾರ್ಥದಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಜರೂರಿಯಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವತತ್ವ ಪ್ರಚಾರ-ಪ್ರಸಾರದ ಜತೆಗೆ ಲಿಂಗಾಯತ ಧರ್ಮ ಹಾಗೂ ಬಸವ ತತ್ವದ ಬಗ್ಗೆ ತಿಳಿಸಿ ಕೊಡಲು ಇಂತಹ ಶಿಬಿರಗಳು ಅವಶ್ಯಕವಾಗಿವೆ ಎಂದು ಹೇಳಿದರು.

ಉಸ್ತುರಿಯ ಶ್ರೀ ಕೋರಣೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಲ್ಲಾ ಸಮಗ್ರ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಹುಲಸೂರು ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಉದ್ಯಮಿ ಸಂಜುಕುಮಾರ ಸುಗರೆ, ಜಾಗತಿಕ ಲಿಂಗಾಯತ ಮಹಾ ಸಭಾ ಹುಲಸೂರು ಘಟಕದ ಅಧ್ಯಕ್ಷ ಪ್ರವೀಣ ಕಾಡಾದಿ, ಹಣಮಂತ ಧನಶೆಟ್ಟಿ, ನಿವೃತ್ತ ಶಿಕ್ಷಕ ಕಾಶಿನಾಥ ಹೊಳಕಡೆ ಇದ್ದರು.

ಹುಲಸೂರು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಸ್ವಾಗತಿಸಿದರು. ಶರಣ ಸಂಸ್ಕೃತಿ ವಿಚಾರ ವೇದಿಕೆ ಸಂಯೋಜಕ ಶಿವಕುಮಾರ ಶಟಗಾರ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ ನಿರೂಪಣೆ ಮಾಡಿದರು. ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಯುವಕರು ಭಾಗವಹಿಸಿದ್ದರು.

ಮನೆ, ಮನಗಳಿಗೆ ಬಸವ ತತ್ವ ಮುಟ್ಟಿಸಬೇಕಿದೆ. ಕಷ್ಟ-ನೋವು ಇದ್ದಲ್ಲಿ ತತ್ವ ಹೇಳಿದರೆ ಆಗದು. ಮನೆಗಳಿಗೆ ಹೋಗಿ ಅವರೊಂದಿಗೆ ಪ್ರೀತಿ ಸ್ನೇಹ ಬೆಳೆಸಬೇಕು. ಅವರ ಕಷ್ಟ ಸುಖಗಳನ್ನು ಕೇಳಬೇಕು. ಸಮಸ್ಯೆಗಳಿಗೆ ಸ್ಪಂದಿಸಿದ ನಂತರ ತತ್ವದ ಬಗ್ಗೆ ತಿಳಿಸಬೇಕು. ಅಂದಾಗ ಅವರಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ.

| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net