ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಅಗತ್ಯ

26-kollegal-1,,,, (,,
Published on

ಕೊಳ್ಳೇಗಾಲ: ಲಿಂಗಾಯತ ಧರ್ಮ ಬಸವಣ್ಣನವರು ಸ್ಥಾಪಿಸಿದ ಶ್ರೇಷ್ಠ ಧರ್ಮವಾಗಿದೆ. ಇದಕ್ಕೆ ಸಂವಿಧಾನ ಮಾನ್ಯತೆ ಅಗತ್ಯವಿದೆ ಎಂದು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ತೇರಂಬಳ್ಳಿ ಗ್ರಾಮದ ಬಸವ ಭವನದಲ್ಲಿ ಜಾಗತಿಕ ಮಹಾಸಭಾ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಜಾಗೃತಿ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಿಂಗಾಯತ ಧರ್ಮ ಸ್ವಂತಂತ್ರ ಧರ್ಮ ಆಗಬೇಕೆಂಬುದು ಎಲ್ಲರ ಆಶಯ ಮತ್ತು ಆಪೇಕ್ಷೆಯಾಗಿದೆ. ನಾವು ಹಿಂದುಗಳಲ್ಲ, ಹಿಂದು ಎಂದು ಒಪ್ಪಿಕೊಂಡರೆ ಶೂದ್ರರಾಗಿ ಉಳಿಯುತ್ತೇವೆ. ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಸ್ವತಂತ್ರ ಧರ್ಮವಾಗಿ ಸ್ಥಾಪನೆಗೊಂಡಿದೆ. ಇದಕ್ಕೆ ಸಂವಿಧಾನ ಮಾನ್ಯತೆ ಅಗತ್ಯವಿದ್ದು ಇದನ್ನು ಕೇಳುವುದು ನಮ್ಮ ಹಕ್ಕು ಎಂದು ನುಡಿದರು.

ನಮ್ಮಲ್ಲಿ ಧರ್ಮಾಭಿಮಾನ ಬೆಳೆಯಬೇಕು. ನಮ್ಮ ಧರ್ಮ ಬೋಧನೆಗೆ ಮಾತ್ರ ಸೀಮಿತವಾದುದಲ್ಲ, ಆಚರಣೆ ಮಾಡುವುದಾಗಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಡಬೇಕು. ಕಾಯಕ ನಿಷ್ಠರಾಗಿರಬೇಕು. ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಮೂಲಕ ನಮ್ಮ ಜನಸಂಖ್ಯೆ ಎಷ್ಟಿದೆ ಎಂಬುದನ್ನು ದಾಖಲಿಸಬೇಕಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಹಿರಿಯ ವಕೀಲ ಕಾಳನಹುಂಡಿ ವಿರೂಪಾಕ್ಷ ಮಾತನಾಡಿ, ಲಿಂಗಾಯತರು ಹಿಂದುಗಳಲ್ಲ, ವೀರಶೈವರೂ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಆಚರಣೆಗಳು, ವೇದ ಆಗಮನಗಳನ್ನು ಧಿಕ್ಕರಿಸಿ ಸ್ಥಾಪಿಸಿದ ಶ್ರೇಷ್ಠ ಧರ್ಮವೇ ಲಿಂಗಾಯತ ಧರ್ಮ ಎಂದು ಹೇಳಿದರು.

ಮುಡಿಗುಂಡ ವಿರಕ್ತ ಮಠ ಹಾಗೂ ಮೈಸೂರು ಅರಮನೆ ಗವಿ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಲಿಂಗಾಯತ ಜನಪ್ರತಿನಿಧಿಗಳು ನಾನು ಲಿಂಗಾಯತ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲದಿರುವುದು ದುರದೃಷ್ಟಕರ ಸಂಗತಿ. ಮಠಾಧೀಶರಲ್ಲಿಯೂ ಒಗ್ಗಟ್ಟು ಇಲ್ಲದಿರುವುದು ಸಮಸ್ಯೆಯಾಗಿದೆ. ಸತ್ಯವನ್ನು ಹೇಳುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಪ್ರಕಾರ ಅವಕಾಶಗಳನ್ನು ಕೊಡಿಸಬೇಕಾದವರು ಧ್ವನಿ ಎತ್ತುತ್ತಿಲ್ಲ ಎಂದು ಹೇಳಿದರು.

ಲಿಂಗಾಯತ ಯುವಕರು ದುಶ್ಚಟಗಳಿಂದ ದೂರ ಉಳಿದು ಧರ್ಮ ಪಾಲನೆ ಮಾಡಬೇಕು. ನಮ್ಮ ಮುಂದಿನ ಪೀಳಿಗೆಯ ಉಳುವಿಗಾಗಿ ಸ್ವತಂತ್ರ ಧರ್ಮ ಮಾನ್ಯತೆ ಪಡೆಯುವುದು ಅವಶ್ಯಕವಾಗಿದೆ. ಮುಂಬರುವ ಜಾತಿ ಗಣತಿ ಸಂದರ್ಭದಲ್ಲಿ ಧರ್ಮ ಮತ್ತು ಜಾತಿಯನ್ನು ಲಿಂಗಾಯತ ಎಂದು ಬರೆಸಬೇಕಿದೆ ಎಂದರು.

ಮಹಾಸಭಾ ಜಿಲ್ಲಾ ಕೋಶಾಧ್ಯಕ್ಷ ಶಿವಪ್ರಸಾದ್, ಕುಂತೂರು ಮಠದ ಶ್ರೀ ಶಿವಪ್ರಭು ಸ್ವಾಮೀಜಿ, ಚಿಕ್ಕಂದವಾಡಿ ಮಠದ ಶ್ರೀ ಬಾಲಷಡಕ್ಷರ ಸ್ವಾಮೀಜಿ, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹೊಂಡರಬಾಳು ಮಠಾಧ್ಯಕ್ಷ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ತೇರಂಬಳ್ಳಿ ಮಠದ ಶ್ರೀ ಲಿಂಗರಾಜು ಸ್ವಾಮೀಜಿ, ತಾಲೂಕು ಘಟಕದ ಅಧ್ಯಕ್ಷ ಲೋಕೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷ ಸುಂದರಪ್ಪ, ತೇರಂಬಳ್ಳಿ ಗ್ರಾಮದ ಗೌಡರ ಶಿವಕುಮಾರಸ್ವಾಮಿ, ಮಹದೇವಪ್ರಭು, ಗುರುಮಲ್ಲೇಶ್ವರ ಬಳಗದ ಕುಮಾರ್, ಲೋಕೇಶ್, ಗ್ರಾಪಂ ಸದಸ್ಯ ರವಿಕುಮಾರ್, ತಾಲೂಕು ಘಟಕದ ಪದಾಧಿಕಾರಿಗಳು, ತೇರಂಬಳ್ಳಿ, ಉತ್ತಂಬಳ್ಳಿ ಹಾಗೂ ಗೊಬ್ಬಳಿಪುರ ಗ್ರಾಮದ ಗೌಡರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net