

ಬೀದರ್: ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ವೈಜ್ಞಾನಿಕ ತಳಹದಿಯನ್ನು ಹೊಂದಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದಿಂದ ನಗರದ ವಿದ್ಯಾನಗರ ಬಡಾವಣೆಯ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ ಜಯದೇವಿ ತಾಯಿ ಲಿಗಾಡೆ ಅವರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಿಂಗಾಯತ ಧರ್ಮ ಜಗತ್ತಿಗೆ ಸಂಸ್ಕೃತಿ, ಆಚಾರ-ವಿಚಾರ, ಕಾಯಕ-ದಾಸೋಹ, ಸಮಾನತೆ, ಜಾತಿ ರಹಿತ ಸಮಾಜ, ಸಕಲ ಜೀವಿಗಳ ಕಲ್ಯಾಣಪರ ಕಾಳಜಿ ತತ್ವಗಳನ್ನು ಲಿಂಗಾಯತ ಧರ್ಮ ನೀಡಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಅವರು ಸ್ತ್ರೀ ಸಮುದಾಯಕ್ಕೆ ಪ್ರೇರಣೆಯಾಗಿದ್ದರೆ, 21ನೇ ಶತಮಾನದಲ್ಲಿ ಜಯದೇವಿ ತಾಯಿ ಲಿಗಾಡೆ ಮಾದರಿಯಾಗಿದ್ದಾರೆ. ಬಸವ ತತ್ವವನ್ನು ಮೈಗೂಡಿಸಿಕೊಂಡಿದ್ದ ಲಿಗಾಡೆ ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರನವರಾದರೂ ಕನ್ನಡದ ನೆಲ, ಜಲ, ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂದರು.
ಬೇಮಳಖೇಡ್ ನ ಆದರ್ಶ ವಿದ್ಯಾಲಯ ಮುಖ್ಯಗುರು ಸರಿತಾ ಹುಡಗಿಕರ್ ಉಪನ್ಯಾಸ ನೀಡಿ, ಶರಣ ಸಂಸ್ಕೃತಿ ಮೈಗೂಡಿಸಿಕೊಂಡಿದ್ದ ಜಯದೇವಿ ತಾಯಿ ಲಿಗಾಡೆ 6ನೇ ತರಗತಿವರೆಗೆ ಶಿಕ್ಷಣ ಪಡೆದರೂ ನಾಲ್ಕು ಸಾವಿರ ತ್ರಿಪದಿ ರಚಿಸಿ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು, ನುಡಿಗಾಗಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಸಕ್ರಿಯ ಭಾಗವಹಿಸಿ ನಾಡ ಪ್ರೇಮ ಮೆರೆದಿದ್ದರು ಎಂದರು.
ನ್ಯಾಯವಾದಿ ಚೇತನಾ ಪಾಟೀಲ್, ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ಸಂಘದ ಅಧ್ಯಕ್ಷೆ ಮೀನಾಕ್ಷಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಿಬಾಯಿ ಬಿರಾದಾರ, ಸುವರ್ಣಾ ಚಿಮಕೋಡೆ, ಶಕುಂತಲಾ ಮಲಕಪನೋರ್, ಮಲ್ಲಿಕಾರ್ಜುನ ಹುಡಗೆ, ಉಮಾಕಾಂತ ಮೀಸೆ, ಶ್ರೀಕಾಂತ ಬಿರಾದಾರ, ಸಂಗ್ರಾಮ ಎಂಗಳೆ, ಶ್ರೀಕಾಂತ ಸ್ವಾಮಿ, ಸಂಜುಕುಮಾರ ಅತಿವಾಳೆ, ಶಿವಕುಮಾರ ಭಾಲ್ಕೆ ಇತರರಿದ್ದರು. ಪ್ರೇಮಾ ಮುಚಳಂಬೆ ಸ್ವಾಗತಿಸಿದರು. ಲಕ್ಷ್ಮೀಬಾಯಿ ಬಿರಾದಾರ ನಿರೂಪಣೆ ಮಾಡಿದರು. ಮಹಾನಂದಾ ಸ್ವಾಮಿ ವಂದಿಸಿದರು.