

ಬಸವಕಲ್ಯಾಣ: ಕೇವಲ ಬಸವತತ್ವ ಪ್ರಚಾರವನ್ನು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಮಾಡಲು ಲಿಂಗಾಯತ ಧರ್ಮ ಪ್ರಸಾರಕರ ವೇದಿಕೆ ಸ್ಥಾಪಿಸಲಾಗುತ್ತಿದೆ ಎಂದು ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷರಾದ ಜಗದ್ಗುರು ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ. ಬೇಗ್ ಸಭಾಮಂಟಪದಲ್ಲಿ ಶನಿವಾರ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಹಯೋಗದಡಿ ಶನಿವಾರ ಆಯೋಜಿಸಿದ್ದ ಎರಡು ದಿನದ ೪ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ವೇದಿಕೆ ಸ್ಥಾಪನೆ ಪ್ರಕ್ರಿಯೆ ಪೂರ್ಣಗೊಂಡಿದೆ. ನೋಂದಣಿ ಮಾಡಿಸುತ್ತಿದ್ದು, ೫೦೦ಕ್ಕೂ ಹೆಚ್ಚು ಬಸವಪರ ಮಠಾಧೀಶರು ಸದಸ್ಯತ್ವ ಪಡೆಯಲಿದ್ದಾರೆ ಎಂದರು.
ವಚನ ಸಾಹಿತ್ಯದ ಶುದ್ಧೀಕರಣ ಮತ್ತು ಪರಿಷ್ಕರಣೆ ಅಗತ್ಯವಿದೆ. ಬಸವಾದಿ ಶರಣರು ಅನುಭವ ಮಂಟಪ ಪದ್ಧತಿ ಜಾರಿಗೆ ತಂದರೆ, ಪ್ರಸ್ತುತ ಕೆಲವರು ಶಿವ ಪದವನ್ನು ಸೇರಿಸಿ ಶಿವಾನುಭವ ಎನ್ನುತ್ತಿದ್ದಾರೆ. ಶರಣರು ಎನ್ನುವ ಪದಕ್ಕೆ ಶಿವ ಸೇರಿಸಿ ಶಿವಶರಣರು ಎಂದು ಹೇಳಿ ಶೈವ ಸಂಸ್ಕೃತಿಯನ್ನು ವಚನ ಸಾಹಿತ್ಯದೊಳಗೆ ನುಗ್ಗಿಸಲು ಯತ್ನಿಸುತ್ತಿರುವುದನ್ನು ಖಂಡಿಸಿದರು.
ನಿಷ್ಠಾವಂತ ಪೂಜ್ಯರು ಮತ್ತು ಶರಣರು ಹೊರಗಿದ್ದೇವೆ. ಅನರ್ಹರು, ಬಂಡವಾಳಶಾಹಿಗಳು ಒಳಗಿದ್ದುಕೊಂಡು ಬಸವ ಧರ್ಮ ಪೀಠವನ್ನು ಒಡೆಯುತ್ತಿದ್ದಾರೆ. ಪೀಠಾಧ್ಯಕ್ಷರಾಗಲು ಯೋಗ್ಯತೆ ಬೇಕು. ಸುಮ್ಮನೆ ಅವರಿವರನ್ನು ಕಂಡರೆ ಅವರಿವರಂತೆ ಹಾಡುವುದರಿಂದ ಬಸವ ತತ್ವ ಪ್ರಚಾರವಾಗಲು ಸಾಧ್ಯವಿಲ್ಲ. ಪ್ರತಿ ಹಳ್ಳಿಗೆ ಬಸವ ತತ್ವ ಪ್ರಚಾರ ಮಾಡಿದ ಮಾತೆ ಮಹಾದೇವಿ ಪೀಠದ ಮೇಲೆ ಕುಳಿತು ಗುರುವಿನ ಆದೇಶ ಮೀರುವವರು ಗುರುದ್ರೋಹಿಗಳು ಎಂದು ಮಾತೆ ಗಂಗಾದೇವಿ ಅವರಿಗೆ ಟಾಂಗ್ ನೀಡಿದರು.
ರಾಷ್ಟ್ರೀಯ ಬಸವದಳ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ, ಧ್ವಜಾರೋಹಣ ನೆರವೇರಿಸಿದ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿದರು. ಚಿಕ್ಕಮಗಳೂರಿನ ಶ್ರೀ ಡಾ.ಜಯಬಸವಾನಂದ ಸ್ವಾಮೀಜಿ, ಮಾತೆ ಸತ್ಯಾದೇವಿ, ಮಾತೆ ಶಾಂತಾದೇವಿ, ಧುಮ್ಮನಸೂರ ಮುಕ್ತಿನಾಥ ಮಠದ ಶ್ರೀ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯ, ಚಿಕ್ಕಮಗಳೂರಿನ ಬಸವದಳ ಅಧ್ಯಕ್ಷ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಅಶೋಕ ಬೆಂಡಿಗೇರಿ, ಡಾ.ಮಹೇಶ ಬಿರಾದಾರ್, ಶಿವರಾಜ ಪಾಟೀಲ್ ಅತಿವಾಳ, ಅಶೋಕ ಮಾನೂರೆ, ರವಿಕಾಂತ ಬಿರಾದಾರ್, ಗಣಪತಿ ದೇಶಮುಖ, ಭೀಮರಾವ ಬಿರಾದಾರ್ ಹೈದರಾಬಾದ್, ಓಂಪ್ರಕಾಶ ರೊಟ್ಟೆ, ಗಣಪತಿ ದೇಶಮುಖ ಇತರರಿದ್ದರು. ಗಂಗಾವತಿ ವೀರೇಶ ನಿರೂಪಣೆ ಮಾಡಿದರು. ಶ್ರೀನಾಥ ಕೋರೆ ವಂದಿಸಿದರು. ಸಚ್ಚಿದಾನಂದ ಚಟ್ನಳ್ಳಿ ರಚಿತ ವಚನ ಪರುಷ ಕೃತಿ ಬಿಡುಗಡೆ ಮಾತಲಾಯಿತು.
ಸರ್ವ ಸಮಸ್ಯೆಗಳಿಗೆ ಬಸವತತ್ವ ಔಷಧ: ವಿಶ್ವದ ಸರ್ವ ಸಮಸ್ಯೆಗಳಿಗೆ ಬಸವ ಸಿದ್ಧಾಂತವೇ ಪರಿಹಾರವಾಗಿದೆ. ಪ್ರತಿಯೊಬ್ಬರೂ ಬಸವ ತತ್ವದಲ್ಲಿ ನಂಬಿಕೆ ಇಡಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರಕಬೇಕಾದರೆ ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು. ಸ್ವಾಭಿಮಾನಿ ಕಲ್ಯಾಣ ಪರ್ವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆ ದಿ.ಧರ್ಮಸಿಂಗ್ ಅವರು ಲಿಂ.ಮಾತೆ ಮಹಾದೇವಿ ಶಿಷ್ಯರಾಗಿದ್ದರು. ಮಾತಾಜಿ ಬಸವಕಲ್ಯಾಣಕ್ಕೆ ಬಂದು ಈ ಪುಣ್ಯಭೂಮಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದರು ಎಂದರು.
ಅಭಿಯಾನ ಯಶಸ್ವಿಯಾಗಿದ್ದು ಮಾತಾಜಿ ಶಿಷ್ಯರಿಂದ: ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿದ್ದು ರಾಷ್ಟ್ರೀಯ ಬಸವದಳದ ಮಾತಾಜಿ ಶಿಷ್ಯರಿಂದ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಹೇಳಿದರು. ತಾಜಿ ಬಸವ ಮಂಟಪ ಸ್ಥಾಪನೆ ಮಾಡಬಾರದಾಗಿತ್ತು ಎಂದು ಹೇಳುವ ಕೆಲ ಮಠಾಧೀಶರು, ಅಭಿಯಾನ ಸಂದರ್ಭದಲ್ಲಿ ವಸತಿ ಮಾಡಿದ್ದು ಮಾತಾಜಿ ಸ್ಥಾಪಿಸಿದ ಬಸವ ಮಂಟಪಗಳಲ್ಲೇ. ಹಲವು ಮಠಾಧೀಶರು ಮಠ ಬಿಟ್ಟು ಹೊರಗಡೆ ಬಂದಿರಲಿಲ್ಲ. ಈಗ ಹೊರಬಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇವರಾರಿಗೂ ಅನ್ಯ ಜಿಲ್ಲೆಗಳಲ್ಲಿ ಶಿಷ್ಯರಿಲ್ಲ. ಇವರೆಲ್ಲ ನಂಬಿಕೊಂಡಿದ್ದು ಮಾತಾಜಿ ಶಿಷ್ಯರನ್ನು ಎಂದರು.
ಪೂಜ್ಯ ಮಾತೆ ಮಹಾದೇವಿ ಅವರನ್ನು ೨೦೦೦ರಲ್ಲಿ ಕಲ್ಯಾಣಕ್ಕೆ ಕರೆತಂದು ಜಾಗ ಕೊಡಿಸಿ ಇದೇ ಕಲ್ಯಾಣ ಜನರ ವಿರೋಧ ಕಟ್ಟಿಕೊಂಡು, ಪೊಲೀಸರಿಂದ ಪೆಟ್ಟು ತಿಂದು ಸಂಘಟನೆ ಮಾಡಿದರು. ಆದರೆ ನಿಜವಾದ ಮಾತಾಜಿ ಶಿಷ್ಯರು ಹೊರಗಿದ್ದೇವೆ. ಭ್ರಷ್ಟರು ಒಳಗಿದ್ದಾರೆ. ಬಸವ ಮಹಾಮನೆಯಲ್ಲಿರುವ ಸ್ವಾಮಿಯೊಬ್ಬರು ಗ್ರಂಥಾಲಯ ತೆಗೆದು ಮಾತಾಜಿ ಸಾಹಿತ್ಯ ನಾಶಪಡಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ.
| ಬಸವರಾಜ ಪಾಟೀಲ್ ಶಿವಪುರ ರಾಷ್ಟ್ರೀಯ ಬಸವದಳ ರಾಜ್ಯಾಧ್ಯಕ್ಷ