ಲಿಂಗಾಂಬುದಿಪಾಳ್ಯ: ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

mysore
Published on

ಮೈಸೂರು: ಸಂಸ್ಕಾರಯುತ ಶಿಕ್ಷಣ ಕಲಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವತಿಯಿಂದ ಲಿಂಗಾಂಬುದಿಪಾಳ್ಯ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪಾಲಕರು ಹೇಳಿದ ಮಾತನ್ನು ಕೇಳಬೇಕು. ಈ ನಿಟ್ಟಿನಲ್ಲಿ ಕಲಿಕೆಯೊಂದಿಗೆ ಸಂಸ್ಕಾರಯುತ ಶಿಕ್ಷಣ ಒದಗಿಸಲು ಮುಂದಾಗಬೇಕು ಎಂದರು.

ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಅನೇಕ ಕಡೆ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳ ಸಮಸ್ಯೆ ಇದೆ. ಇದನ್ನು ಗಮನಿಸಿ ಸಿಎಸ್‌ಆರ್ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ನೀಗಿಸಲು ಸ್ಥಳೀಯ ಕಾರ್ಖಾನೆಗಳ ಮೂಲಕ ಅನುದಾನ ಕೊಡಿಸಿ ನಿರ್ಮಿಸಲಾಗಿದೆ. ಈಗ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೂ ಕೆಲ ಸಂಸ್ಥೆಗಳ ಜತೆಗೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದೆ. ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಿದ್ದೇನೆ. ಗ್ರಾಮಕ್ಕೆ ಕುಡಿಯುವ ನೀರು ತಲುಪುವಂತೆ ಮಾಡುವುದಲ್ಲದೆ, ಚರಂಡಿ, ವಿದ್ಯುತ್, ರಸ್ತೆ ಕಲ್ಪಿಸಲಾಗಿದೆ. ಯುಜಿಡಿ ಸಮಸ್ಯೆ ಬಗ್ಗೆ ಆಗಿಂದಾಗ್ಗೆ ದೂರುಗಳು ಬರುತ್ತಿರುವುದರಿಂದ ಪರಿಗಣಿಸಲಾಗಿದೆ. ಶೀಘ್ರದಲ್ಲೇ ಯುಜಿಡಿ ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

ಈಗಿನ ಜನರಿಗೆ ದಾನ ಮಾಡುವ ಮನಸ್ಸು ಬರಲ್ಲ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮನಸ್ಸು ಬಂದರೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದರು.

ಅಂಗನವಾಡಿ ಕಟ್ಟಡ ನಿರ್ಮಾಣದ ದಾನಿ ಎ.ಎನ್.ಪ್ರಕಾಶ್ ಮಾತನಾಡಿ, ನಾನು ಊರಿನಲ್ಲಿ ಓಡಾಡುವ ಸಮಯದಲ್ಲಿ ಶಿಥಿಲಗೊಂಡು ಹಾಳಾಗಿದನ್ನು ನೋಡಿದ ಮೇಲೆ ಹೊಸ ಕಟ್ಟಡ ನಿರ್ಮಿಸಬೇಕೆಂದು ಮನಸ್ಸು ಬಂತು. ಅದಕ್ಕಾಗಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಮುಖಂಡ ಮಂಜು ಅಂಗನವಾಡಿಯ 25 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿದರು. ಶ್ರೀರಾಂಪುರ ಮುಖ್ಯಾಧಿಕಾರಿ ಎಚ್.ಎಂ.ಸುರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ತಿಬ್ಬಯ್ಯ, ಇಂಜಿನಿಯರ್‌ಗಳಾದ ಶ್ರೀನಿವಾಸ್, ಶರತ್ ಮತ್ತಿತರರು ಹಾಜರಿದ್ದರು.

10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ

ಹತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರ ವಿಶೇಷತೆಯಿಂದ ಕೂಡಿದೆ. ಸರ್ಕಾರದಿಂದ ನಿರ್ಮಾಣ ಮಾಡುವ ಕಟ್ಟಡಕ್ಕಿಂತ ಇದು ಭಿನ್ನವಾಗಿದೆ.

ಕೇಂದ್ರದಲ್ಲಿ ಕುಡಿಯುವ ನೀರು, ಶೌಚಗೃಹ, ಸ್ಟೋರ್ ರೂಂ, ಮಕ್ಕಳಿಗೆ ಬೇಕಾಗುವ ಆಟೋಟ ಸಾಮಗ್ರಿ ಹೊಂದಿಸಲಾಗಿದೆ. ದಾನಿ ಎ.ಎನ್.ಪ್ರಕಾಶ್ ಸಂಪೂರ್ಣ 10 ಲಕ್ಷ ರೂ. ವೆಚ್ಚವನ್ನು ಭರಿಸಿ ಕಟ್ಟಿಸಿಕೊಟ್ಟಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net