

ಲಿಂಗದಹಳ್ಳಿ: ಮುಖ್ಯಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಅನುದಾನದಂತೆ ನನ್ನ ಕ್ಷೇತ್ರಕ್ಕೂ 50 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅದರಲ್ಲಿ ಸುಮಾರು 10 ಕೋಟಿ ಅನುದಾನ ಲಿಂಗದಹಳ್ಳಿ ಹೋಬಳಿಯ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಬಾಕ್ಸ್ ಚರಂಡಿ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗಾಗಿ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಶುಕ್ರವಾರ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಲಿಂಗದಹಳ್ಳಿ ಹೋಬಳಿ 36 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು, ಮುಂದಿನ ಬೇಸಿಗೆಯ ಒಳಗೆ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಲಿಂಗದಹಳ್ಳಿ ಗಾಮ ಪಂಚಾಯಿತಿ ಕಟ್ಟಡ 1930ರಲ್ಲಿ ನಿರ್ಮಾಣಗೊಂಡು 95 ವರ್ಷಗಳು ಕಳೆದಿದ್ದರಿಂದ ಶಿಥಿಲಗೊಂಡಿತ್ತು. ಐದು ವರ್ಷಗಳ ಹಿಂದೆ ಗ್ರಾಪಂ ಅಧ್ಯಕ್ಷರಾಗಿದ್ದ ಎಲ್.ಎನ್.ಲಿಂಗರಾಜು ಅವರು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಗ್ರಾಪಂ ವರ್ಗ-1ರ ಅನುದಾನದಲ್ಲಿ ಮತ್ತು 15ನೇ ಹಣಕಾಸು ಯೋಜನೆ ಸೇರಿ 36 ಲಕ್ಷ ರೂಪಾಯಿ ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ವಿಳಂಬವಾದರೂ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಲಿಂಗದಹಳ್ಳಿ ಹೋಬಳಿ ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶವಾಗಿದ್ದರೂ ಕುಡಿಯುವ ನೀರು ಮತ್ತು ಕೃಷಿ ನೀರಾವರಿ ಯೋಜನೆಗಳಿಲ್ಲದ ಕಾರಣ ಅಡಕೆ, ತೆಂಗು ಮುಂತಾದ ತೋಟದ ಬೆಳೆಗಳಿಗೆ ಕೆರೆಗಳ ನೀರು ಆಸರೆಯಾಗಿದ್ದು, ಕೆರೆಗಳು ಭತ್ತಿದ ನಂತರ ಅಂತರ್ಜಲ ಇಲ್ಲದೆ ತೋಟಗಳು ಒಣಗಿ ಹೋಗುತ್ತಿದ್ದ ಸಂದರ್ಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಊರ ಮುಂದಿನ ಕೆರೆ ತುಂಬಿಸುವ ಯೋಜನೆ ಮತ್ತು ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಅಡಕೆ ತೋಟಗಳಿಗೆ ನೀರಿನ ವ್ಯವಸ್ಥೆ ಮಾಡಿ ರೈತರ ನೆಮ್ಮದಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಲಿಂಗದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಎನ್.ಲಿಂಗರಾಜು ಮಾತನಾಡಿ, ನಾನು ಗ್ರಾಪಂ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಲಿಂಗದಹಳ್ಳಿ ಗ್ರಾಪಂ ಕಟ್ಟಡ ಶಿಥಿಲಗೊಂಡು ಮಳೆ ನೀರು ಸೋರುತ್ತಿದ್ದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿದ್ದೆ. ಈಗ ಕಟ್ಟಡ ಭವ್ಯವಾಗಿ ನಿರ್ಮಾಣವಾಗಿದೆ. ನಾನು ಅಧಿಕಾರದಲ್ಲಿದ್ದಾಗ ಮೊದಲ ಬಾರಿ ಶಾಸಕರಾಗಿದ್ದ ಜಿ.ಎಚ್.ಶ್ರೀನಿವಾಸ್ ಅವರು ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರು ಎಂದು ತಿಳಿಸಿದರು.
ತಾಪಂ ಇಒ ಡಾ. ಡಿ.ದೇವೇಂದ್ರಪ್ಪ, ಎನ್‌ಆರ್‌ಇಜಿ ಉಪನಿರ್ದೇಶಕ ಯೋಗೇಶ್, ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಇಂದ್ರಮ್ಮ, ಪಿಡಿಒ ಎನ್.ಎಸ್.ನಾಗರಾಜಪ್ಪ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ಮಾಜಿ ಸದಸ್ಯರಾದ ಎಸ್.ಎ.ಕೃಷ್ಣಪ್ಪ, ಎಲ್.ಪಿ.ಲೋಕೇಶ್, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಎಲ್.ಎಂ.ಮಧು, ಎಲ್.ವಿ.ರಾಜು, ಎಲ್.ಆರ್.ರಘು, ಸತೀಶ್, ಎಲ್.ಆರ್.ನವೀನ್‌ಕುಮಾರ್, ಎಂ.ಆರ್.ಧನಂಜಯ, ಎಂ.ಕೆ.ಚಂದ್ರಪ್ಪ, ಲಕ್ಷ್ಮೀದೇವಿ ರಂಗನಾಥ್, ನಾಗರತ್ನಾ ಭದ್ರಾಚಾರ್, ಹೇಮಬಾಯಿ ಕೃಷ್ಣನಾಯ್ಕ, ಗೌರಮ್ಮ ನಾಗರಾಜ್, ರೇಖಾ ಸ್ವಾಮಿನಾಥನ್, ಪ್ರೇಮಾ ಪ್ರಕಾಶ್ ಇತರರಿದ್ದರು.