ಲಿಂಗತ್ವ ದೌರ್ಜನ್ಯ ಕಾರ್ಯಕ್ರಮ

23tnpnewsfile01
ತಿ.ನರಸೀಪುರ ತಾಲೂಕು ಕೇತಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿ.ಕೃಷ್ಣಕುಮಾರ್ ಉದ್ಘಾಟಿಸಿದರು.
Published on

ತಿ.ನರಸೀಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಸಿ.ಕೃಷ್ಣ ಕುಮಾರ್ ಸಲಹೆ ನೀಡಿದರು.

ತಾಲೂಕಿನ ಕೇತಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಕರೋಹಟ್ಟಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಿಂಗತ್ವ ದೌರ್ಜನ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರೂ ಸಬಲರಾಗಬೇಕೆಂಬ ಉದ್ದೇಶದೊಂದಿಗೆ ಸರ್ಕಾರಗಳು ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿವೆ. ಅದರಲ್ಲಿ ಪ್ರಮುಖವಾಗಿ ಸಂಜೀವಿನಿ ಯೋಜನೆ ಜಾರಿಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬ ಸ್ವಸಹಾಯ ಸಂಘಗಳ ಸದಸ್ಯತ್ವ ಪಡೆದು ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಂಡು ಆರ್ಥಿಕವಾಗಿ ಸುಧಾರಣೆ ಹೊಂದಬಹುದಾಗಿದೆ ಎಂದರು.

2013ರಲ್ಲಿ ಜಾರಿಗೆ ಬಂದ ಈ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ತಾಲೂಕಿನ 36 ಗ್ರಾ.ಪಂ.ಗಳಲ್ಲಿಯೂ ಒಕ್ಕೂಟ ರಚನೆಯಾಗಿದ್ದು, ಸಾವಿರಾರು ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ,ಅವಕಾಶಗಳಿಂದ ವಂಚಿತರಾಗುತ್ತಿರುವುದನ್ನು ಗಮನಿಸಿ ಸಂವಿಧಾನದ ಮುಖೇನ ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಪ್ರವೃತ್ತಿ ಬದಲಾಗಬೇಕಿದ್ದು, ಹೆಣ್ಣು ಮಕ್ಕಳೂ ದೌರ್ಜನ್ಯವನ್ನು ಪ್ರಶ್ನೆ ಮಾಡುವ ಧೈರ್ಯ ಪ್ರದರ್ಶಿಸಬೇಕು ಎಂದರು.

ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಮಣಿಕಂಠರಾಜು ಮಾತನಾಡಿದರು. ಸಂಜೀವಿನಿ ಸಂಸ್ಥೆಯ ಮೇಲ್ವಿಚಾರಕರಾದ ಸ್ವಾಮಿ, ಸುರೇಶ್, ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್, ಸದಸ್ಯರಾದ ಸವಿತಾ, ದಿವ್ಯಾ, ಮಂಜುಳಾ, ಅಭಿವೃದ್ಧಿ ಅಧಿಕಾರಿ ಲಿಂಗರಾಜು, ಕೋಮಲಾ ನಾಗರಾಜ್, ಎಂಬಿಕೆ ರೋಜಾ, ಸೋಸಲೆ ನಾಗಮಣಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಕೋಮಲಾ, ಕಾರ್ಯದರ್ಶಿ ಪವಿತ್ರಾ ಹಾಗೂ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net