ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಸೌಲಭ್ಯ ಸಿಗಲಿ

PRAMILA NAYDU
Published on

ಗದಗ: ರಾಜ್ಯದ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ವಸತಿ ಯೋಜನೆಯಡಿ ಸೌಲಭ್ಯ ಒದಗಿಸಬೇಕು. ಇದರಿಂದ ಅವರಿಗೆ ಉದ್ಯೋಗಿನಿ ಯೋಜನೆಯಡಿ ಸೌಲ ಮಂಜೂರಾತಿಗೆ ಅನುಕೂಲವಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಜನಾಂಗದಂತೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿಯೊಂದಿಗೆ ಸಾಲ ದೊರೆಯಬೇಕು. ಅಂದಾಗ ಅವರು ಆರ್ಥಿಕವಾಗಿ ಸಬಲರಾಗಿ ಸ್ವತಂತ್ರವಾಗಿ ನೆಮ್ಮದಿ ಜೀವನ ನಡೆಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಲಾಕ್​ಡೌನ್​ನಲ್ಲಿ ಪಿಂಚಣಿದಾರರಿಗೆ ಆರ್ಥಿಕ ತೊಂದರೆಯಾಗಿತ್ತು. ಆಗ ಆಯೋಗದಿಂದ ನಿರಾಶ್ರಿತ, ನಿರ್ಗತಿಕ, ನಿರುದ್ಯೋಗ ಮಹಿಳೆಯರಿಗೆ ಆಹಾರ ಕಿಟ್ ಮತ್ತಿತರ ಸೌಕರ್ಯ ಒದಗಿಸಲಾಗಿದೆ. ಹಲವೆಡೆ ಜಿಲ್ಲಾಡಳಿತಗಳಿಗೆ ಸೂಚಿಸಿ ವಸತಿ, ಆಹಾರ ಕಿಟ್ ತಲುಪಿಸಲಾಗಿದೆ ಎಂದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳದೆ ಜಾಗೃತರಾಗಿ ದೌರ್ಜನ್ಯವೆಸಗಿದ ವ್ಯಕ್ತಿಗೆ ಕಾನೂನಿನನ್ವಯ ಶಿಕ್ಷೆ ಕೊಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಸಫಲವಾಗಿದೆ. ಜಿಲ್ಲೆಯಲ್ಲಿ ಉಜ್ವಲ, ಸಾಂತ್ವನ, ಸ್ವಾಧಾರ ಕೇಂದ್ರಗಳನ್ನು ಪರಿಶೀಲಿಸಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೂರು ನಿವಾರಣೆ ಸಮಿತಿಯಿಂದ ಸಕ್ರಿಯ ಕೆಲಸಗಳು ಆಗಬೇಕು. ಇದರಿಂದ ನೊಂದ ಮಹಿಳೆಯರಿಗೆ ಸೌಲಭ್ಯ, ನ್ಯಾಯ ದೊರಕಬೇಕು. ದೇವದಾಸಿಯರ ಮಕ್ಕಳಿಗೆ ಶಿಕ್ಷಣ ದೊರಕಬೇಕು. ಅವರಿಗೆ ಇರುವ ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಲಾಗುವುದು. ಅವರು ಶೈಕ್ಷಣಿಕವಾಗಿ ಮುಂದುವರಿದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆತು, ಗೌರವಯುತ ಜೀವನ ಸಾಗಿಸುವಂತಾಗಬೇಕು ಎಂದರು.

ಲೋಕ ಅದಾಲತ್ 19ಕ್ಕೆ: ಹಳ್ಳಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಂಬಂಧಿಸಿದ ಇಲಾಖೆಗಳು ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಸೆ. 19ರಂದು ರಾಜ್ಯಾದ್ಯಂತ ಲೋಕ ಅದಾಲತ್ ಆಯೋಜಿಸಲಾಗಿದೆ. ಇದರಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಮಹಿಳೆಯರು ಪ್ರಯೋಜನ ಪಡೆಯಬೇಕು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net