ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಿ:  ಡಾ.ಅಕ್ಕೈ ಪದ್ಮಶಾಲಿ ಆಗ್ರಹ

mysore
Published on

ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಕೊಡಬೇಕು. ಶೇ.1ರಷ್ಟು ಮೀಸಲಾತಿ ಒದಗಿಸಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಆಗ್ರಹಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನ ಅಂಗವಾಗಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಜೀವವಿಮಾ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ 140 ಕೋಟಿ ಜನಸಂಖ್ಯೆಯಲ್ಲಿ 14 ಕೋಟಿಯಷ್ಟು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟಾಗಿದೆ. ಆದ್ದರಿಂದ ಈ ಸಮುದಾಯದವರು ರಾಜಕೀಯವಾಗಿ ಮುಂದೆ ಬರಬೇಕಿದೆ. ಅದಕ್ಕಾಗಿ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಜನಪ್ರತಿನಿಧಿಗಳು ಆಗಲು ವೇದಿಕೆ ಕಲ್ಪಿಸಬೇಕು ಎಂದರು.

ಲಿಂಗತ್ವ ಅಲ್ಪಸಂಖ್ಯಾತರು ಒಬ್ಬಂಟಿಯಲ್ಲ. ಇವರು ಸಮಾಜದ ಭಾಗ. ಇವರು ಸಹ ಸಮಾಜದೊಂದಿಗೆ ಸಕ್ರಿಯವಾಗಿ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಈ ಸಮುದಾಯದಿಂದ ಮತ್ತು ಸಮಾಜದಿಂದಲೂ ಕೆಲ ಬದಲಾವಣೆ ಆಗಬೇಕು. ಜತೆಗೆ, ಸುಪ್ರೀಂಕೋರ್ಟ್‌ನ ಅನೇಕ ತೀರ್ಪುಗಳು ಈ ಸಮುದಾಯದ ಪರ ಬಂದಿವೆ. ಇದನ್ನು ಬಳಕೆ ಮಾಡಿಕೊಂಡು ಹೋರಾಟದ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಬದುಕನ್ನೂ ರೂಪಿಸಿಕೊಳ್ಳಬೇಕು ಎಂದರು.

ಲಿಂಗತ್ವ ಬರೀ ಗಂಡು-ಹೆಣ್ಣಿಗೆ ಮಾತ್ರ ಸಿಮೀತವಲ್ಲ. ಇದರ ಪರಿಮಿತಿ ಆಚೆಯೂ ಇದೆ. ಇದುವೇ ಬಹುದೊಡ್ಡ ವೈರುಧ್ಯ ಸಂಸ್ಕೃತಿ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಂಡು ಅಲ್ಲದ ಹೆಣ್ಣು ಅಲ್ಲದವರು ಇರಬಾರದು ಎಂದಿದ್ದಾರೆ. ಹಾಗಾದರೆ, ನಾವು ಎಲ್ಲಿಗೆ ಹೋಗಬೇಕು? ಶಿವ ಮತ್ತು ಅಯ್ಯಪ್ಪ ಅರ್ಧನಾರೀಶ್ವರ ಆಗಿರುವಾಗ ಲಿಂಗತ್ವವನ್ನು ಸೀಮಿತಗೊಳಿಸುವ ಅಗತ್ಯ ಇದೆಯೇ? ಎಲ್ಲರೂ ಲಿಂಗತ್ವ ಪರಿಮಿತಿಯನ್ನು ದಾಟಬೇಕಿದೆ ಎಂದರು.

ಅಪ್ಪ-ಅಮ್ಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ನಾವು ಬೇಡವಾದ ಮಕ್ಕಳು. ಪ್ರಕೃತಿಗೆ ವಿರುದ್ಧವಾಗಿ ಹುಟ್ಟಿದವರು. ಹೀಗಾಗಿ, ನಿರ್ಲಕ್ಷೃಕ್ಕೆ ಒಳಗಾಗಿದ್ದ ಈ ಸಮುದಾಯದ ಜನರು ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವಕಾಶ ಕಲ್ಪಿಸಿಕೊಟ್ಟರು.

ಇದು ಈಗಲೂ ಚಾಲ್ತಿಯಲ್ಲಿದೆ. ಪಂಚ ಗ್ಯಾರಂಟಿ ಯೋಜನೆ ಲಾಭವನ್ನೂ ನಮ್ಮ ಸಮುದಾಯಕ್ಕೂ ವಿಸ್ತರಣೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಇದೀಗ ಮೈಸೂರಿನಲ್ಲಿ ಕೈಗೊಂಡಿರುವ ಆರೋಗ್ಯ ವಿಮೆ ಸೌಲಭ್ಯವನ್ನು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ವಿಸ್ತರಣೆಗೆ ಕ್ರಮ ವಹಿಸಲು ಆಗ್ರಹಿಸಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ 50 ಜನರಿಗೆ ಜೀವ ವಿಮೆ ಕೊಡಿಸಲಾಗಿದೆ. ಅಪಘಾತವಾದರೆ 1 ಲಕ್ಷ ರೂ., ಮೃತಪಟ್ಟರೆ 2 ಲಕ್ಷ ರೂ. ಹಣವನ್ನು ವಿಮೆ ಕಂಪನಿ ನೀಡುತ್ತದೆ. ಮೊದಲ ವರ್ಷದ ಹಣವನ್ನು ಪಾವತಿಸಿದ್ದು, ವಿಮಾದಾರರು ಮುಂದಿನ ವರ್ಷದ ಹಣವನ್ನು ಕಟ್ಟಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಜೀವ ವಿಮೆ ಮಾಡಿಸಿರುವುದು ಪಕ್ಷದ ಮಾನವೀಯತೆ ಕೆಲಸವಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಸಚಿವ ಎಂ ಶಿವಣ್ಣ, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಪ್ರಣತಿ ಪ್ರಕಾಶ್, ರಘುರಾಜೇ ಅರಸ್, ಮಾವಿನಹಳ್ಳಿ ರವಿ, ಡಿ.ಈಶ್ವರ್ ಚಕ್ಕಡಿ, ಡಾ.ನಾಗರಾಜ್, ನಾಗೇಶ್, ಮಹದೇವ, ಶಿವಕುಮಾರ್, ಪ್ರವೀಣ್, ಮಹೇಂದ್ರ, ಭೈರೇಗೌಡ, ಹರೀಶ್ ರೆಡ್ಡಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net