ಲಿಂಗ ತಾರತಮ್ಯವಿಲ್ಲದೆ ಯಾರಿಗೆ ಬೇಕಾದರೂ ಕ್ಯಾನ್ಸರ್ ಬರಬಹುದು: ಡಾ. ಸುಧಾ

ಲಿಂಗ ತಾರತಮ್ಯವಿಲ್ಲದೆ ಯಾರಿಗೆ ಬೇಕಾದರೂ ಕ್ಯಾನ್ಸರ್ ಬರಬಹುದು: ಡಾ. ಸುಧಾ
Published on

ಹಾಸನ : ಯಾವುದೇ ವಯಸು,್ಸ ಲಿಂಗ ತಾರತಮ್ಯವಿಲ್ಲದೆ ಯಾರಿಗೆ ಬೇಕಾದರೂ ಕ್ಯಾನ್ಸರ್ ಬರಬಹುದು ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧಾ ತಿಳಿಸಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಸನ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ ಮತ್ತು ರೋಟರಿ ಸಮುದಾಯ ದಳ - ಹಾಸನದ ಸ್ಪರ್ಶ, ಇವರುಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

ಕ್ಯಾನ್ಸರ್ ರೋಗ ಲಕ್ಷಣಗಳು ಕಂಡು ಬಂದರೆ ಭಯಪಡದೆ ಪ್ರಾರಂಬಿಕ ಹಂತದಲ್ಲೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ರೋಗಕ್ಕೆ ಚಿಕಿತ್ಸೆ ನೀಡಬಹುದು ಇದರಿಂದ ಕ್ಯಾನ್ಸರ್ ರೋಗ ಉಲ್ಬಣವಾಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಜಿಲ್ಲಾ ಸಂಯೋಜಕ ಎಂ.ಹೆಚ್ ಯೋಗನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿ , ಪ್ರತಿ ವರ್ಷ ನವೆಂಬರ್ 7 ರ ದಿನವನ್ನು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವಾಗಿ ಪ್ರಪಂಚದ್ಯಾಂತ ಆಚರಿಸಲಾಗುತ್ತಿದ್ದು, ಕ್ಯಾನ್ಸರ್ ರೋಗದ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಿ, ಕ್ಯಾನ್ಸರ್ ಆರಂಬಿಕ ಪತ್ತೆ ಮತ್ತು ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸವುದು ಇದರ ಉದ್ದೇಶವಾಗಿದೆ ಎಂದರು.

ಗುಣಪಡಿಸಲಾಗದ ರೋಗಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಮನೆ ಆಧಾರಿತ ಉಪಶಮನ ಆರೈಕೆ ನೀಡಲು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ಹಿಮ್ಸ್ ಜಂಟಿಯಾಗಿ ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮವನ್ನು ಕಳೆದ 4 ವರ್ಷಗಳಿಂದ ಹಾಸನ ನಗರದಲ್ಲಿ ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಸುಮಾರು 1000 ರೋಗಿಗಳು ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿದ್ದು ಇದರ ಅವಶ್ಯಕತೆ ಇರುವವರು 9900020487 ಗೆ ಸಂಪರ್ಕಿಸುವಂತೆ ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಸ್ವಯಂ ಸೇವಕ ವೈದ್ಯರು ಮತ್ತು ಪ್ರಿವೆನ್‌ಟೀವ್ ಆಂಕಾಲಾಜಿಸ್ಟ್ ಡಾ. ಜಗದೀಶ್ ಸಿ.ಎನ್ ಮಾತನಾಡಿ, ಕ್ಯಾನ್ಸರ್ ರೋಗ ಬರಲು ನಾನಾ ಕಾರಣಗಳಿರಬಹುದು, ಜೀವನ ಶೈಲಿ ಮತ್ತು ಸೇವಿಸುವ ಆಹಾರದ ಪ್ರಭಾವ ಕೂಡ ಇದ್ದು, ಪ್ರತಿಯೊಬ್ಬರು ಹಿತವಾದ ಆಹಾರವನ್ನು ಮಿತವಾಗಿ ಸೇವಿಸಬೇಕು ಹಾಗೂ ಆರೋಗ್ಯಕರ ಆಹಾರ ಸೇವಿಸುವುದು ತುಂಬ ಮುಖ್ಯ ಇದರಿಂದ ಕ್ಯಾನ್ಸರ ಹರಡುವ ಸಾದ್ಯತೆ ಕಡಿಮೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ ಕೃಷ್ಣೇಗೌಡ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಮಹಿಳಾ ಘಟಕದ ಸಂಚಾಲಕ ಬಿ ಹೆಚ್ ರಾಮೇಗೌಡ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಯೋಗೇಶ್, ಸ್ಕೌಟ್ಸ್ ಗೈಡ್ಸ್ ಸಂಚಾಲಕಿ ಡಾ. ರೂಪ ಕೆ.ವಿ, ಎನ್.ಸಿ.ಸಿ. ಅಧಿಕಾರಿ ಎಂ. ಕುಸುಮ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಅಧ್ಯಕ್ಷ ರೊ. ರಮಾನಂದ, ಕಾರ್ಯದರ್ಶಿರೊ. ಸಿದ್ಧೇಶ್ವರ ಹೆಚ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net