

ವಿಜಯಪುರ: ನಮ್ಮ ದೇಶದಲ್ಲಿ ಪ್ರಸ್ತುತ ಲಿಂಗ ಸಂವೇದನೆ ವಿಷಯ ಸಮಾಜದ ಗಮನ ಸೆಳೆಯುತ್ತಿದೆ. ಪ್ರತಿಯೊಂದು ೇತ್ರದಲ್ಲಿ ಮಹಿಳೆಯ ಸಾಧನೆಯ ಅವಲೋಕನ ಮಾಡಿದ್ದಲ್ಲಿ ಮಹಿಳೆಯು ಪುರುಷ ಸಮಾನಳಾಗಿ ನಿಲ್ಲುತ್ತಿದ್ದಾಳೆ.
ಲಿಂಗ ತಾರತಮ್ಯ ಸಾಮಾಜಿಕ ಪ್ರಗತಿಯಲ್ಲಿ ಹಿಂದೆ ಬೀಳುವಂತಾಗಿದ್ದು, ಇತ್ತೀಚೆಗೆ ಸದ್ದು ಮಾಡುತ್ತಿರುವ ಭ್ರೂಣ ಹತ್ಯೆಯಂಥ ನೀಚ ಕೃತ್ಯಗಳಿಂದಾಗಿ ನಾವೆಲ್ಲ ತಲೆ ತಗ್ಗಿಸುವಂತಾಗಿದೆ ಎಂದು ಡಾ. ಭಕ್ತಿ ಮಹಿಂದ್ರಕರ ಹೇಳಿದರು.
ನಗರದ ಬಂಗರಮ್ಮ ಸಜ್ಜನ ಮಹಿಳಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಲಿಂಗ ಸಂವೇದನೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹೆಣ್ಣು ಭ್ರೂಣಹತ್ಯೆಯಲ್ಲಿ ಮಹಿಳೆಯು ಭಾಗವಹಿಸುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಇಂದಿನ ಭಾರತದ ತಾಂತ್ರಿಕ ಪ್ರಗತಿಯಲ್ಲಿ ಮಹಿಳೆ ಸಾಧನೆ ಅದ್ಭುತವಾಗಿದ್ದರೂ ಕೂಡ ಹೆಣ್ಣು ಭ್ರೂಣ ಹತ್ಯೆ ಪ್ರತಿದಿನ ನಡೆಯುತ್ತಿದೆ. ಹೆಣ್ಣು ಮಗು ರಕ್ಷಿಸಲು ನಾವೆಲ್ಲ ಹೋರಾಟಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಅಧ್ಯಕ್ಷ ಶರದ ರೊಡಗಿ ಮಾತನಾಡಿ, ಜಾಗತಿಕವಾಗಿ ಹಾಗೂ ದೇಶದಲ್ಲಿನ ಮಹಿಳೆಯರ ಪ್ರಗತಿಯ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡುವಂತಾಗಿದೆ ಎಂದರು.
ಪ್ರಾಚಾರ್ಯ ಡಾ. ತಮ್ಮಣ್ಣ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಸ್.ಜಿ ಮುರನಾಳ, ಸಂಯೋಜಕ ಮತ್ತಿತರರಿದ್ದರು.