

ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ನೂರಕ್ಕೆ ನೂರು ನನ್ನ ವಿರೋಧ ಇದೆ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಉಪಮುಖ್ಯಮಂತ್ರಿ. ಕೇವಲ ರಾಮನಗರ, ಕನಕಪುರ, ಕುಣಿಗಲ್ಗೆ ಅಲ್ಲ. ಅದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸುವ ಮೂಲಕ ಹೇಮೆ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಹೋರಾಟದ ಪರವಾಗಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ತುಮಕೂರಿನ ನಾಗರಿಕರು, ಮತದಾರರಿಗೆ ಯಾರೇ ಅನ್ಯಾಯ ಮಾಡಿದರೂ ಅದು ಅನ್ಯಾಯವೇ. ನಾನು ಬರುವುದಕ್ಕೆ ಮುನ್ನ ಎಲ್ಲವೂ ನಡೆದುಹೋಗಿತ್ತು. ಈ ಯೋಜನೆ ನನ್ನ ಕಾಲದಲ್ಲಿ ಶುರುವಾಗಿದ್ದಲ್ಲ. ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಆಗುವ ತೊಂದರೆ ಬಗ್ಗೆ ಯಾರ್ಯಾರಿಗೆ ಹೇಳಬೇಕು ಅವರಿಗೆಲ್ಲ ಹೇಳಿದ್ದೀನಿ. ಮಂತ್ರಿಗಳ ಗಮನಕ್ಕೂ ತಂದಿದ್ದೀನಿ. ನಾನೊಬ್ಬ ಸಚಿವನಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಎರಡನೇ ಏರ್ಪೋರ್ಟ್ ತುಮಕೂರಲ್ಲಿ ಮಾಡಿ!: ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರೆ ತುಮಕೂರಿನಲ್ಲಿ ಮಾಡಿ ಇಲ್ಲವಾದರೆ ಬೆಂಗಳೂರಿನ ಹಳೇಯ ಎಚ್ಎಎಲ್ ಏರ್ಪೋರ್ಟ್ನಲ್ಲೇ ಮಾಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಅಂತಾರಾಷ್ಟ್ರೀಯ ಮಾನ ನಿಲ್ದಾಣ ಬಗ್ಗೆ ನಾನು ಈಗಾಗಲೇ ಎರಡು ಬಾರಿ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ. ಅದನ್ನು ಬಹಿರಂಗ ಪಡಿಸುವುದಿಲ್ಲ. ತಮಿಳುನಾಡು ಸರ್ಕಾರವು ಹೊಸೂರು ಬಳಿ ವಿಮಾನ ನಿಲ್ದಾಣ ನಿರ್ಮಿಸಲು ಹೊರಟಿರುವುದರಿಂದ ನನ್ನ ಮೊದಲ ಆದ್ಯತೆ ತುಮಕೂರು&ನೆಲಮಂಗಲ ಮಧ್ಯದಲ್ಲಿ ಎಲ್ಲಾದರೂ ಒಂದು ಕಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂಬುದು ನನ್ನ ಭಾವನೆ ಎಂದರು. ಬೆಂಗಳೂರಿನ ಹಳೇಯ ಎಚ್ಎಎಲ್ ಏರ್ಪೋರ್ಟ್ನೇ ಅಭಿವೃದ್ಧಿ ಪಡಿಸುವುದು ಸೂಕ್ತ. ಅದಕ್ಕೆ ಹೆಚ್ಚು ಹಣ ಬೇಕಿರುವುದಿಲ್ಲ. ತಾಂತ್ರಿಕವಾಗಿ ಸೂಕ್ತವಾಗಿರುವುದರಿಂದ ಅಲ್ಲಿ ಎರಡನೇ ಏರ್ಪೋರ್ಟ್ ಮಾಡಬೇಕೆಂಬುದು ನನ್ನ ಮನವಿ. ಇಡೀ ಭಾರತ ದೇಶದಲ್ಲಿ ಬೆಂಗಳೂರು ಹೊರತುಪಡಿಸಿದರೆ ನಾಗಲೋಟದಲ್ಲಿ ಬೆಳೆಯುತ್ತಿರುವುದು ತುಮಕೂರು ಮಾತ್ರ. ಹಾಗಾಗಿ, ತುಮಕೂರಿಗೆ ಹೊಂದಿಕೊಂಡಿರುವ ದಾಬಸ್ಪೇಟೆ, ನೆಲಮಂಗಲ ಮಧ್ಯೆ ಮಾಡಿದರೆ ನಮ್ಮದೇನು ತಕರಾರರು ಇಲ್ಲ. ಆದರೆ, ಅದನ್ನು ಬಿಟ್ಟು ಇನ್ನೆಲ್ಲೋ ಮಾಡುವುದು ಸೂಕ್ತವಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಇನ್ನೆರಡು ದಿನದೊಳಗೆ ಪತ್ರ ಬರೆಯುವೆ ಎಂದು ತಿಳಿಸಿದರು.
3 ವರ್ಷದಲ್ಲಿ 256 ಸಾವು: ತುಮಕೂರು (ಊರುಕೆರೆ)&ನೆಲಮಂಗಲ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ವರ್ಷದಲ್ಲಿ 256 ಮಂದಿ ಮೃತಪಟ್ಟಿದ್ದು, ಒಂದೇ ಸ್ಥಳದಲ್ಲಿ ಪದೇಪದೆ ಅಪಘಾತ ಆಗುತ್ತಿದೆ ಎಂದು ಸೋಮಣ್ಣ ಕಳವಳ ವ್ಯಕ್ತಪಡಿಸಿದರು.ನೆಲಮಂಗಲದಿಂದ ತುಮಕೂರು ಹೊರವಲಯದ ಊರುಕೆರೆವರೆಗೆ 2,046 ಕೋಟಿ ರೂ. ಮೊತ್ತದ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದರೂ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಪ್ರತಿನಿತ್ಯ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನಕ್ಕೆ ತಂದಿದ್ದು, ಜ.2ರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಿ, ಮುಂದಿನ ನಾಲ್ಕೆ$ದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಒತ್ತಡ ತಂದಿದ್ದೇನೆ ಎಂದರು.
ರವಿ ಬುದ್ಧಿವಂತ ರಾಜಕಾರಣಿ: ಎಂಎಲ್ಸಿ ಸಿ.ಟಿ.ರವಿ ಸದನದಲ್ಲಿ ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದನ್ನು ವಿಧಾನಪರಿಷತ್ನ ಸಭಾಪತಿಗಳು ತೀರ್ಮಾನಿಸಲಿದ್ದಾರೆ. ಆದರೆ, ರವಿ ಅವರನ್ನು ಬಂಧಿಸಿ ಮಾನಸಿಕ ಹಿಂಸೆ ಕೊಟ್ಟಿದ್ದು ಯಾವ ನಾಗರಿಕ ಸರ್ಕಾರಕ್ಕೂ ಶೋಭೆ ತರುವಂಥದ್ದಲ್ಲ ಎಂದು ವಿ.ಸೋಮಣ್ಣ ತೀಕ್ಷ$$$$್ಣವಾಗಿ ಪ್ರತಿಕ್ರಿಯಿಸಿದರು. ವಿಧಾನ ಪರಿಷತ್ನಲ್ಲಿ ಸಭಾಪತಿಗಳು ಹೇಗೆ ಕಸ್ಟೋಡಿಯನ್ನೋ ಅದೇ ರೀತಿ ಪಾರ್ಲಿಮೆಂಟ್ನಲ್ಲಿ ಸ್ಪೀಕರ್ ಇರುತ್ತಾರೆ. ಅವರ ತೀರ್ಮಾನವೇ ಅಂತಿಮ. ರವಿ ಬುದ್ಧಿವಂತ ರಾಜಕಾರಣಿ. ಆ ಮಟ್ಟಕ್ಕಿಳಿದು ಮಾತನಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಅದನ್ನು ತೀರ್ಮಾನ ಮಾಡಬೇಕಾದವರು ಸಭಾಪತಿ ಎಂದರು.
ರಾಜ್ಯದಲ್ಲಿ ಗ್ರೀನ್ ಫೀಲ್ಡ್ ರಸ್ತೆ ಪ್ರಸ್ತಾಪ: ರಾಜ್ಯದಲ್ಲಿ ಎರಡು ಗ್ರೀನ್ ಫೀಲ್ಡ್ ರಸ್ತೆ ಕಾಮಗಾರಿ ಯೋಜನೆಗೆ ಶ್ರೀದಲ್ಲೇ ಹಸಿರು ನಿಶಾನೆ ಸಿಗಲಿದೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 55,000 ಕೋಟಿ ರೂ., ವೆಚ್ಚದ ಪುಣೆ&ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಕಾಮಗಾರಿಯು ರಾಜ್ಯದಲ್ಲಿ 500 ಕಿ.ಮೀ. ಹಾದು ಹೋಗಲಿದೆ. ತುಮಕೂರಲ್ಲಿ 55 ಕಿ.ಮೀ., ಕಾಮಗಾರಿ ನಡೆಯಲಿದೆ. ಇದರ ಜತೆಗೆ 114 ಕಿ.ಮೀ., ಹಾಸನ& ತಿಪಟೂರು&ಹುಳಿಯಾರು&ಹಿರಿಯೂರು ಗ್ರೀನ್ ಫೀಲ್ಡ್ ಕಾಮಗಾರಿಯನ್ನು 4500 ಕೋಟಿ ರೂ. ವೆಚ್ಚದಲ್ಲಿ ಮಾಡಲು ಉದ್ದೇಶಿಸಲಾಗಿದೆ. ಈ ಎರಡು ಪ್ರಸ್ತಾವಿತ ಯೋಜನೆ ಕೇಂದ್ರ ಸರ್ಕಾರದ ಮುಂದೆ ಇದೆ. ಸದ್ಯದಲ್ಲೇ ಈ ಯೋಜನೆಗಳಿಗೆ ಅನುಮೋದನೆ ಸಿಗಲಿದೆ ಎಂದರು.
ಕತ್ತಲಲ್ಲಿಟ್ಟು ಸಹಾಯ ಮಾಡಬೇಡಿ: ಒಂದು ಜಿಲ್ಲೆಯನ್ನು ಕತ್ತಲೆ ಕೋಣೆಯಲ್ಲಿಟ್ಟು ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಯಾವುದೇ ಯೋಜನೆಗಳು ಸಾಧುವಲ್ಲ. ಶಾಸಕ ಸುರೇಶಗೌಡ, ಎಂ.ಟಿ.ಕೃಷ್ಣಪ್ಪ, ಸೊಗಡು ಶಿವಣ್ಣ ಎಲ್ಲರೂ ಈ ವಿಚಾರನ್ನು ಪ್ರಸ್ತಾಪಿಸಿದ್ದಾರೆ ಹೊರತು ಯಾರೊಬ್ಬರು ಯೋಜನೆಯ ತಾಂತ್ರಿಕ ಮಾಹಿತಿಯನ್ನು ಪೂರ್ಣವಾಗಿ ಕೊಟ್ಟಿಲ್ಲ. ಆದರೂ, ಸುರೇಶಗೌಡ ಹೇಳಿಕೆಗೆ (ಯೋಜನೆ ರದ್ದು ಪಡಿಸುವ) ನಾನು ಬದ್ಧನಾಗಿದ್ದೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಮಾಧ್ಯಮಗಳ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಮತ್ತೆ ವಿನಂತಿ ಮಾಡುತ್ತೇನೆ. ಯೋಜನೆ ಸಾಧಕ&ಬಾಧಕ ನೋಡಿ ಯೋಜನೆ ಕೈಗೆತ್ತಿಕೊಳ್ಳಿ. ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿದ್ದಾಗ ಹಠಕ್ಕೆ ಬೀಳದೆ ಮರು ಪರಿಶೀಲಿಸಿ ಹೆಜ್ಜೆಯಿಡಿ. ನೈಸರ್ಗಿಕವಾಗಿ ಕುಣಿಗಲ್ಗೆ ಹೇಮೆ ನೀರು ಹರಿಯುತ್ತಿದೆ. ಜಿಲ್ಲೆಯ ರೈತರನ್ನು ತೊಂದರೆಗೆ ಸಿಲುಕಿಸಿ ನೀರು ತೆಗೆದುಕೊಂಡು ಹೋಗಲು ನನ್ನ ವಿರೋಧವಿದೆ ಎಂದು ಪುನರುಚ್ಚರಿಸಿದರು.