ಲಿಂಕ್​ ಕೆನಾಲ್​ ಯೋಜನೆ ಕೈಬಿಡಿ

10 12
Published on

ಬಿಜೆಪಿ&ಜೆಡಿಎಸ್​ ಒತ್ತಾಯ, ಡಿಸಿ ಕಚೇರಿ ಮುಂದೆ ಅರ್ನಿದಿಷ್ಟಾವಧಿ ಧರಣಿ

ತುಮಕೂರು: ರಾಮನಗರ ಜಿಲ್ಲೆಗೆ ನೇರವಾಗಿ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಆರಂಭಿಸಿರುವ ಲಿಂಕ್​ ಕೆನಾಲ್​ ನೀರಾವರಿ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್​ ವತಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅರ್ನಿದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.

ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಹೇಮಾವತಿ ನೀರಿನ ಹೋರಾಟ ಬೆಂಬಲಿಸಿದ ಕೆಲವು ವಕೀಲರು ಸೋಮವಾರ ಧರಣಿಯಲ್ಲಿ ಭಾಗವಹಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರ್​, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಕೆ.ಎಲ್​.ಭಾರತಿ, ಬಿಜೆಪಿ ವಕೀಲ ಪ್ರಕೋಷ್ಟದ ಹಿಮಾನಂದ್​, ಕುಮಾರಸ್ವಾಮಿ ಹಾಗೂ ಹಲವು ವಕೀಲರು ಹೋರಾಟದಲ್ಲಿ ಭಾಗವಹಿಸಿ, ಹೇಮಾವತಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕೂಡಲೇ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ಕಾಮಗಾರಿ ಸ್ಥಗಿತಗೊಳಿಸಿಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​ ರವಿಶಂಕರ್​ ಹೆಬ್ಬಾಕ ಮಾತನಾಡಿ, ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ಯೋಜನೆ ಸರ್ಕಾರ ಸ್ಥಗಿತಗೊಳಿಸಬೇಕು. ಜಿಲ್ಲೆಯ ಜನರ, ರೈತರಿಗೆ ದ್ರೋಹ ಮಾಡಿ ನಮ್ಮ ನೀರಿನ ಹಕ್ಕನ್ನು ಕಸಿಯುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಮಾಡುತ್ತಿದೆ ಎಂದರು. ಹಾಲಿ ಇರುವ ನಾಲೆ ಮೂಲಕ ಕುಣಿಗಲ್​ಗೆ ಹೇಮಾವತಿ ನೀರು ತೆಗೆದು ಕೊಂಡುಹೋಗಲು ಅಭ್ಯಂತರವಿಲ್ಲ. ಆದರೆ, ನೀರನ್ನು ಕಬಳಿಸುವ ಹುನ್ನಾರದ ಪೈಪ್​ಲೈನ್​ ಮೂಲಕ ನೀರನ್ನು ತೆಗೆದುಕೊಂಡುಹೋಗಲು ಬಿಡುವುದಿಲ್ಲ. ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್​ ಬಿದರೆ, ಮುಖಂಡರಾದ ಎಸ್​.ಶಿವಪ್ರಸಾದ್​, ದಿಲೀಪ್​ಕುಮಾರ್​, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮತ್ತಿತರರು ಮುಖಂಡರು ಮಾತನಾಡಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಗುಬ್ಬಿ ನಂಜೇಗೌಡ, ಸಾಗರನಹಳ್ಳಿ ವಿಜಯಕುಮಾರ್​, ಚಂದ್ರಶೇಖರ ಬಾಬು, ಟಿ.ಎಚ್​.ಹನುಮಂತರಾಜು, ಬಾವಿಕಟ್ಟೆ ನಾಗಣ್ಣ, ಎಚ್​.ಎಂ.ರವೀಶಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ಕೆ.ಪಿ.ಮಹೇಶ್​, ಜೆಡಿಎಸ್​ ಜಿಲ್ಲಾ ಒಬಿಸಿ ಘಟಕ ಅಧ್ಯಕ್ಷ ಯೋಗಾನಂದಕುಮಾರ್​, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಲೋಕೇಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net