ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮಾಡುವ ಸಲುವಾಗಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳನ್ನು ಕರೆದು ಹೆದರಿಸಿ ನೀರು ಲಭ್ಯ ಎಂದು ತಾಂತ್ರಿಕ ವರದಿ ಪಡೆದಿದ್ದಾರೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದರು.
ಜಿಲ್ಲೆಯ ಪಾಲಿಗೆ ಮರಣ ಶಾಸನ ಎನ್ನಿಸಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರುದ್ಧದ ಜಿಲ್ಲೆಯ ಪರವಾದ ಗಟ್ಟಿದನಿಯಾಗಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಂಗಳವಾರ ತುಮಕೂರು ವಿವಿ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ನೀರಾವರಿ ಬೇಸಿನ್ಗೂ, ಕಾವೇರಿ ನ್ಯಾಯಾಧಿಕರಣಕ್ಕೂ ಸಂಬಂಧವಿಲ್ಲ. ಹಾಗಾಗಿ, ಕುಡಿಯುವ ನೀರಿನ ಉದ್ದೇಶಕ್ಕೆ ಜಿಲ್ಲೆಯ ಕೆಲವು ತಾಲೂಕುಗಳಿಗೆ ನೀರು ಒದಗಿಸಿದ್ದೇವೆ. ಕುಣಿಗಲ್ ತಾಲೂಕಿಗೆ ಸ್ವಾಭಾವಿಕವಾಗಿಯೇ ಸಾಕಷ್ಟು ನೀರು ಹರಿಯಲು ಸಾಧ್ಯವಿದೆ ಎಂಬುದಕ್ಕೆ ಈ ವರ್ಷದಲ್ಲಿಯೇ ಅಲ್ಲಿನ ಕೆರೆ ತುಂಬಿರುವುದೇ ಸಾ. ನಮ್ಮ ಜಿಲ್ಲೆಯ ಪಾಲಿನ ನೀರನ್ನು ಎಂದೂ ಪಡೆಯಲು ಸಾಧ್ಯವಾಗಿಲ್ಲ ಎಂದರು.
ತುಮಕೂರು ಜಿಲ್ಲೆಗೆ ಕೇವಲ ಕುಡಿಯುವ ನೀರಿಗಾಗಿ ಹೇಮಾವತಿ ನೀರು ಬಿಟ್ಟಿದ್ದಾರೆ. ನೀರಾವರಿಗೆ ಎಂದೂ ನೀರು ಕೊಟ್ಟಿಲ್ಲ, ಈವರೆಗೂ ಸುಳ್ಳು ಹೇಳಿಕೊಂಡು ಬರಲಾಗಿದೆೆ. ನಮ್ಮ ಪಾಲಿನ ನೀರು ಎಂದೂ ನಮಗೆ ಬಂದಿಲ್ಲ. ಇಂತಹ ಸಮಯದಲ್ಲಿ ಅವೈಜ್ಞಾನಿಕವಾಗಿ ಮತ್ತೊಂದು ಜಿಲ್ಲೆಗೆ ನೀರು ಕೊಡುವುದು ಜಿಲ್ಲೆಯ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದರು.
ಚುನಾವಣೆಯಲ್ಲಿ ಗೆದ್ದವರಿಂದ ಕೆಲಸ ಮಾಡಿಸಿ: ನಾನು ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಜಿಲ್ಲೆಯ ಜನರು ತಪ್ಪು ತಿಳಿಯಬಾರದು. ನಾನು ನನಗೆ ಶಕ್ತಿಯಿದ್ದ ಸಂದರ್ಭದಲ್ಲಿ ವಿರೋಧ ಮಾಡಿದ್ದೇನೆ. ಯೋಜನೆಯನ್ನು ತಡೆದು ನಿಲ್ಲಿಸಿದ್ದೇನೆ. ಆದರೆ, ಈಗ ಚುನಾವಣೆಯಲ್ಲಿ ಗೆದ್ದವರಿಂದ ಕೆಲಸ ಮಾಡಿಸಿ ಎಂದು ಮಾಧುಸ್ವಾಮಿ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು. ಲಿಂಕ್ ಕೆನಾಲ್ ಯೋಜನೆಗೆ ಬ್ರೇಕ್ ಹಾಕಿ ಆ ಹಣವನ್ನು ನಾಲೆ ಆಧುನೀಕರಣಕ್ಕೆ ಬಳಸಿದವನು ನಾನು. ಚುನಾವಣೆಯಲ್ಲಿ ಸೋತ ನಂತರ ಹೊಸ ಸರ್ಕಾರ ಬಂದಾಗ ಯೋಜನೆ ವಿರೋಧಿಸಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದೆ. ಆದರೆ, ಈ ಸಂದರ್ಭದಲ್ಲಿ ನನ್ನ ಜತೆಗಿದ್ದವರೇ ಸುದ್ದಿಗೋಷ್ಠಿಗೆ ಗೈರಾದರು ಎಂದು ಬೇಸರಿಸಿದರು. ನಾಯಕತ್ವ ಇಲ್ಲದೆ ಹೋರಾಟ ಕಷ್ಟ. ಹಾಗಾಗಿ, ಸೂಡೋ ರಾಜಕಾರಣಿ ನಾನಲ್ಲ, ಹೋರಾಟ ಕೈಗೆತ್ತಿಕೊಂಡರೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಚುನಾವಣೆಯಲ್ಲಿ ಸೋತಿರುವ ನಾನು ಶಕ್ತಿ ಇಲ್ಲದೆ ಗಂಭೀರವಾಗಿ ಮನೆಯಲ್ಲಿದ್ದೇನೆ. ನನ್ನ ನಂಬಿದ ಜನರ ಕಷ್ಟ, ಸುಖ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ವಿ.ಸೋಮಣ್ಣ ನೀರಾವರಿ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕು. ನಾವೆಲ್ಲರೂ ಅವರ ಹಿಂದೆ ಹೋಗೋಣ ಎಂದರು.
ಕೇಂದ್ರ ಸಚಿವ ಸೋಮಣ್ಣ ನಾಯಕತ್ವ ವಹಿಸಲಿ: ಕೇಂದ್ರ ಸಚಿವರು ಜಿಲ್ಲೆಯಲ್ಲಿ ಯಾವ ಹೋರಾಟ ಅಥವಾ ಪಕ್ಷದ ಪರವಾಗಿ ಯಾವ ಚುನಾವಣೆಗೆ ಬಂದಿದ್ದಾರೆ?. ನಾಲೆ ಕಾಮಗಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವುದನ್ನು ಬಿಟ್ಟರೆ ಜಿಲ್ಲೆಯ ಜನರ ಪರವಾಗಿ ಅವರು ಏಕೆ ದನಿ ಎತ್ತುತ್ತಿಲ್ಲ? ಅಧಿಕಾರ ಅನುಭವಿಸಲು ಮಾತ್ರ ಜಿಲ್ಲೆಯನ್ನು ಬಳಸಿಕೊಂಡರೆ ಜನರು ಸಹಿಸುವುದಿಲ್ಲ ಎಂದ ಮಾಧುಸ್ವಾಮಿ, ಲಿಂಕ್ ಕೆನಾಲ್ ತಡೆಯಲು ಕೇಂದ್ರ ಸಚಿವ ವಿ.ಸೋಮಣ್ಣ ನಾಯಕತ್ವ ವಹಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಸೋಮಣ್ಣ ಲಿಂಕ್ ಕೆನಾಲ್ ವಿರೋಧಿ ಹೋರಾಟಕ್ಕೆ ಬರಲಿ, ಕೇಂದ್ರ ಸಚಿವರಾಗಿದ್ದಾರೆ, ಹೋರಾಟಕ್ಕೆ ಬರದೆ ಯೋಜನೆ ತಡೆಯಲು ಸಾಧ್ಯವಾದರೆ ತಡೆಯಲಿ. ಅಧಿಕಾರ ಅನುಭವಿಸಲು ಒಬ್ಬರು, ಹೋರಾಟ ಮಾಡಲು ಮತ್ತೊಬ್ಬರು ಆಗಬಾರದು. ಸಚಿವರಾಗಿದ್ದಾಗ ಹೋರಾಟ ಮಾಡಬಾರದು ಎಂದಾದರೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಪರವಾಗಿ ನಿಲ್ಲಲಿ. ಸೋಮಣ್ಣ ಹೋರಾಟದ ನೇತೃತ್ವ ವಹಿಸಿಕೊಂಡರೆ ನಾವೆಲ್ಲರೂ ಅವರ ಹಿಂದೆ ಬರುತ್ತೇವೆ. | ಜೆ.ಸಿ.ಮಾಧುಸ್ವಾಮಿ ಮಾಜಿ ಸಚಿವ