ಲಾರಿಗೆ ಕಾರು ಡಿಕ್ಕಿ, ಓರ್ವ ಸಾವು

H13 Accident 1
ಸಂಗ್ರಹ ಚಿತ್ರ
Published on

ಹುಬ್ಬಳ್ಳಿ: ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ನೂಲ್ವಿ ಕ್ರಾಸ್ ಪಾರ್ಲೆಜಿ ಗೋಡೌನ್ ಬಳಿ ಗುರುವಾರ ಸಂಭವಿಸಿದೆ.

ತಮಿಳುನಾಡು ಸೇಲಂ ನಿವಾಸಿ ಅಯ್ಯನಾರ್ ಪರುಮಾಳ್ (54) ಮೃತಪಟ್ಟವರು. ಪೆರಿಮಾಳ್ ಚೆಲ್ಲಕನ್ (49), ಸಾವಿತ್ರಿ ಅಯ್ಯನಾರ್ (50), ಕದ್ರೇಶ್ ಚಲ್ಲಕನ್ (25), ಕಾರು ಚಾಲಕ ಸೆಲ್ವಮಣಿ ಕರ್ಣನ್ (27) ಗಾಯಗೊಂಡವರು.

ಅಯ್ಯನಾರ್ ಕುಟುಂಬದವರೊಂದಿಗೆ ಟಾಟಾ ಬೋಲ್ಟ್ ಕಾರಿನಲ್ಲಿ ಸೇಲಂನಿಂದ ಮುಂಬೈ ಕಡೆಗೆ ಹೊರಟಿದ್ದರು. ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಇಂಡಿಕೇಟರ್ ಹಾಕದೇ ರಸ್ತೆಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ಪಕ್ಕ ಕುಳಿತಿದ್ದ ಪರುಮಾಳ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ.

ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ರಮೇಶ ಗೋಕಾಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಲಾರಿ ಚಾಲಕ, ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಪ್ರಾಣ ಉಳಿಸಿದ ಸವಾರರು !: ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಸಿಲುಕಿಕೊಂಡಿದ್ದವರ ರಕ್ಷಣೆ ಮಾಡುವ ಮೂಲಕ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಉಳಿದ ವಾಹನ ಸವಾರರು ಮಾನವೀಯತೆ ಮೆರೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಒಳಗಿದ್ದವರು ಗಾಯಗೊಂಡು ನರಳಾಡುತ್ತಿದ್ದರು. ಕೂಡಲೆ ಸ್ಪಂದಿಸಿದ ವಾಹನ ಸವಾರರು ಕಾರಿನ ಕಿಟಕಿ ಗಾಜು ಒಡೆದು ನಾಲ್ವರನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಕಿಮ್ಸ್​ಗೆ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net