

ಹಾಸನ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಅಣಚಿಹಳ್ಳಿ ಗ್ರಾಮದ ಕ್ರಾಸ್ ಬಳಿ ರಸ್ತೆಯ ಎಡಬದಿಯಲ್ಲಿ ಸೋಮವಾರ ರಾತ್ರಿ ಹೋಗುತ್ತಿದ್ದ ಬೈಕಿಗೆ ವೇಗವಾಗಿ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ.
ಹಾಸನ ತಾಲೂಕು, ಕಸಬಾ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ತಿಮ್ಮಪ್ಪ (38) ಮೃತ ವ್ಯಕ್ತಿ.
ತಿಮ್ಮಪ್ಪ ಅವರು ಸೋಮವಾರ ಹಾಸನ ನಗರಕ್ಕೆ ತಮ್ಮ ಬೈಕಿನಲ್ಲಿ ಬಂದಿದ್ದಾರೆ. ರಾತ್ರಿ ಸುಮಾರು 8.30ರ ಸಮಯದಲ್ಲಿ ಹಾಸನ ನಗರದಿಂದ ತಿಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಅಣಚಿಹಳ್ಳಿ ಗ್ರಾಮದ ಕ್ರಾಸ್ ಬಳಿ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ರಸ್ತೆಯ ಎಡಭಾಗದ ಬೈಕ್ ಚಾಲನೆ ಮಾಡಿಕೊಂಡು ಹೋಗುವಾಗ ಆಲೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದ ತಿಮ್ಮಪ್ಪ ಅವರ ಹೊಟ್ಟೆ ಮತ್ತು ಕಾಲಿನ ಮೇಲೆ ಲಾರಿಯ ಟೈಯರ್ ಹರಿದಿದ್ದರಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಿಮ್ಮಪ್ಪನನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ತಿಮ್ಮಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ತಾಯಿ ನೀಲಮ್ಮ ಅವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.