ಲಾರಿ ಡಿಕ್ಕಿ ಬೈಕ್ ಸವಾರ ಸಾವು

ಲಾರಿ ಡಿಕ್ಕಿ ಬೈಕ್ ಸವಾರ ಸಾವು
Published on

ಆಲೂರು : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರ ಭರತವಳ್ಳಿ ಬಳಿ ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ 8ಗಂಟೆಯ ಸಮಯದಲ್ಲಿ ನಡೆದಿದೆ.

ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಬಂದಿಹಳ್ಳಿ ಗ್ರಾಮದ ಓದಪ್ಪ ಶೆಟ್ಟಿ ಎಂಬುವರ ಮಗ ರಾಕೇಶ (20) ಮೃತ ದುರ್ದೈವಿಯಾಗಿದ್ದು. ತನ್ನ ಸ್ವಗ್ರಾಮದಿಂದ ಹಾಸನದ ಎನ್.ಡಿ.ಆರ್. ಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಬೆಳಿಗ್ಗಿನ ಜಾವ ಕಾಲೇಜಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಭರತವಳ್ಳಿ ತಿರುವಿನಲ್ಲಿ ಹಾಸನದ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಪರಿಣಾಮ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಈಗಾಗಲೇ ಹಲವಾರು ಮಂದಿ ಬೈಕ್ ಹಾಗೂ ಕಾರಿನ ಸವಾರರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ರಸ್ತೆಯಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸದೆ ಇರುವ ಕಾರಣ ಕಾಮಗಾರಿ ಪೂರ್ಣಗೊಳ್ಳದೆ ಈ ರೀತಿ ಸಾವುನೋವು ಸಂಭವಿಸುತ್ತಿವೆ. ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಇದ್ದರೆ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net