ಲಾರಿ ಚಾಲಕನಿಗೆ ಬೆದರಿಸಿ ಸುಲಿಗೆ  24 ತಾಸಿನಲ್ಲೇ ಆರೋಪಿಗಳ ಪತ್ತೆ

IMG-20230712-WA0090.jpg
Published on

ದಾವಣಗೆರೆ: ಹಳೇ ಬಾತಿಯ ಸಮೀಪದ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ಮೂವರನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು, ಘಟನೆಯಾದ 24 ತಾಸಿನಲ್ಲಿ ಪತ್ತೆ ಹಚ್ಚಿದ್ದಾರೆ.

ಬೂದಾಳ್ ರಸ್ತೆಯ ಆರೋಪಿ ಶರತ್‌ಕುಮಾರ್ (20)ನನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷದ ಇಬ್ಬರು ಬಾಲಕರನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.

ಸುಲಿಗೆ ಮಾಡಿದ್ದ 65 ಸಾವಿರ ರೂ. ಮೌಲ್ಯದ 3 ಮೊಬೈಲ್, 1650 ನಗದು, ಕೃತ್ಯಕ್ಕೆ ಬಳಸಿದ 80 ಸಾವಿರ ರೂ. ಮೌಲ್ಯದ ಡಿಯೋ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮಾರುತಿ ಅವರು ಸರಕು ತುಂಬಿದ ಲಾರಿಯನ್ನು ಬೆಳಗಾವಿಯಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಪುಣೆ-ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದಾಗ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಹಳೇ ಬಾತಿ ಹತ್ತಿರ ಹೈವೇ ರಸ್ತೆಯಲ್ಲಿ ಪಂಕ್ಚರ್ ಆಗಿದೆ. ಲಾರಿಯನ್ನು ನಿಲ್ಲಿಸಿಕೊಂಡು ನಿಂತಿರುವಾಗ ಬೈಕ್‌ನಲ್ಲಿ ಬಂದ ಈ ಮೂವರು ಚಾಕು ತೋರಿಸಿ ಹೆದರಿಸಿ ಮಾರುತಿ ಅವರ ಬಳಿ ಇದ್ದ 2,500 ನಗದು ಹಾಗೂ 25 ಸಾವಿರ ರೂ. ಮೌಲ್ಯದ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಗ್ರಾಮಾಂತರ ಠಾಣೆಯ ಪಿಐ ಲಿಂಗನಗೌಡ ನೆಗಳೂರ, ಪಿಎಸ್‌ಐ ಎ.ಆರ್. ಮುಂದಿನಮನಿ ಮತ್ತು ಸಿಬ್ಬಂದಿ ದೇವೇಂದ್ರ ನಾಯ್ಕ, ಅಣ್ಣಯ್ಯ, ಮಹಮ್ಮದ್, ಯೂಸುಫ್, ವೀರೇಶ್, ಮಂಜಾನಾಯ್ಕ, ಕೆ.ಆರ್.ಅನಿತಾಬಾಯಿ, ಜೀಪ್ ಚಾಲಕ ಅಜ್ಜಯ್ಯ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net