ಲಾರಿ ಕದ್ದಿದ್ದ ನಾಲ್ವರು ಆರೋಪಿಗಳ ಬಂಧನ

Crime Logo
Published on

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಮುಖ್ಯ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಶನಿವಾರ ರಾಮಾಪುರ ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬನಿಗೆ ಬಲೆ ಬೀಸಿದ್ದಾರೆ.

ಮೈಸೂರಿನ ರಷಿದ್ ಖಾನ್ (32), ಕೌದಳ್ಳಿ ಗ್ರಾಮದ ಸೈಯದ್ ಗುರ್ಫೀರ್ (46), ಅಕ್ಮಲ್ (30) ಹಾಗೂ ಕಿಜಾರ್ ಉಲ್ಲಾ (28) ಬಂಧಿತರು. ಮೌಹಿನ್ ಖಾನ್ ಪರಾರಿಯಾಗಿದ್ದಾನೆ. ಗ್ರಾಮದ ಪಂಚಾಕ್ಷರಿ ಎಂಬುವರಿಗೆ ಸೇರಿದ ಲಾರಿಯನ್ನು ಫೆ.1ರಂದು ರಾತ್ರಿ ಮಲೆಮಹದೇಶ್ವರ ಮುಖ್ಯ ರಸ್ತೆಯ ಪಂಕ್ಚರ್ ಅಂಗಡಿ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಈ ಐವರು ಕಳ್ಳತನ ಮಾಡಿದ್ದರು. ಪಂಚಾಕ್ಷರಿ ಅವರು ಲಾರಿ ಅಸೋಶಿಯೇಷನ್‌ಗೆ ತಿಳಿಸಿ ಹುಡುಕಾಟ ನಡೆಸಿದ್ದರು. ಈ ವೇಳೆ ಲಾರಿಯು ಲೊಕ್ಕನಹಳ್ಳಿ ಗ್ರಾಮದ ಸಂಪಿಗೇಶ್ವರ ದೇಗುಲ ಸಮೀಪದ ಕೊಳ್ಳೇಗಾಲಕ್ಕೆ ತೆರಳುವ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಡಿಸ್ಕ್ ಸಮೇತ 9 ಚಕ್ರಗಳು, 2 ಬ್ಯಾಟರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪಂಚಾಕ್ಷರಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇನ್ಸ್‌ಪೆಕ್ಟರ್ ಶೇಷಾದ್ರಿ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಕಾರ್ಯಾಚರಣೆ ಕೈಗೊಂಡಿದ್ದರು. ಶನಿವಾರ ಆರೋಪಿಗಳನ್ನು ಬಂಧಿಸಿ ಗೂಡ್ಸ್ ವಾಹನವನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ಮತ್ತೊಬ್ಬನಿಗಾಗಿ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಲಿಯಾಖತ್ ಆಲಿಖಾನ್, ಗಿರೀಶ್, ರಾಜು ಮಕುಂದರ್ ಹಾಗೂ ಪರಶುರಾಮ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net