

ಬೈಲಹೊಂಗಲ, ಬೆಳಗಾವಿ: ಮುಂದಿನ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಪಟ್ಟಣದ ಶ್ರೀ ವರ್ತಿಸಿದ್ಧಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಆಡಳಿತ ಮಂಡಳಿ, ಸರ್ವ ಸದಸ್ಯರ, ಸಿಬ್ಬಂದಿ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ 22.59 ಲಕ್ಷ ರೂ. ನಿವ್ವಳ ಲಾಭ ಗಳಿಸಿ, ಪ್ರಗತಿಯತ್ತ ಸಾಗಿದೆ ಎಂದು ಸೊಸೈಟಿ ನಿರ್ದೇಶಕ ಬಾಬು ಬಸಪ್ಪ ಕುಡಸೋಮಣ್ಣವರ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವರ್ತಿಸಿದ್ಧ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ 24ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ದಿಮೆದಾರರು, ವ್ಯಾಪಾರಸ್ಥರು, ಕೃಷಿಕರು, ಕರಕುಶಲಗಾರರು, ನೌಕರ ವರ್ಗದವರಿಗೆ ಹಣಕಾಸಿನ ನೆರವು ನೀಡುತ್ತ ಅವರ ಆರ್ಥಿಕತೆ ಅಭಿವೃದ್ಧಿಪಡಿಸುತ್ತಿದೆ.
ಸಂಘವು 3,250 ಸದಸ್ಯರಿಂದ 98.5 ಲಕ್ಷ ರೂ. ಷೇರು ಬಂಡವಾಳ, 27.26 ಕೋಟಿ ರೂ. ಠೇವು ಹೊಂದಿ, 18.09 ಕೋಟಿ ರೂ. ಸಾಲ ನೀಡಿದೆ. 7.60 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿ, 31.08 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಮುರಗೋಡ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಕ್ಷೇತ್ರ ಬೈಲವಾಡ ಶ್ರೀ ವರ್ತಿಸಿದ್ಧಬಸವೇಶ್ವರ ಆಶೀರ್ವಾದದಿಂದ ಸೊಸೈಟಿ ಪ್ರಗತಿಯತ್ತ ಸಾಗುತ್ತಿದೆ. ಸೊಸೈಟಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯಕ್ಷ ಗಂಗಪ್ಪ ಬೋಳಣ್ಣವರ ಮಾರ್ಗದರ್ಶನದಲ್ಲಿ ಸದಸ್ಯರು, ಸೊಸೈಟಿ ಪ್ರಗತಿಗೆ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದಾರೆ. ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಪ್ರಗತಿಗೆ ಶ್ರಮಿಸಬೇಕೆಂದರು. ನಿರ್ದೇಶಕರಾದ ಬಾಬಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಮೊರಬದ, ಗಂಗಪ್ಪ ಭರಮಣ್ಣವರ, ಮಹಾರುದ್ರಪ್ಪ ಸಂಪಗಾಂವಿ, ವಿ.ಜಿ.ಸಾಲಿಮಠ, ದುಂಡಪ್ಪ ತುರಮರಿ, ಸುನೀಲ ವಳಸಂಗ, ಸಣ್ಣಬಸಪ್ಪ ಕುಡಸೋಮಣ್ಣವರ, ರಾಜೇಶ ಬಡಿಗೇರ, ಡಿ.ಆರ್. ತಳವಾರ ಇತರರು ಇದ್ದರು. ರಾಮಲಿಂಗ ಕುಡಸೋಮಣ್ಣವರ ಸ್ವಾಗತಿಸಿದರು. ದೀಪಕ ಕುಡಸೋಮಣ್ಣವರ ವರದಿ ಓದಿದರು. ಎಂ.ಎಂ. ಕೋಲಕಾರ ನಿರೂಪಿಸಿದರು. ಕುಮಾರ ಇಂಗಳಗಿ ವಂದಿಸಿದರು.