

ಹಾಸನ: ಸಾರ್ವಜನಿಕರಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಬೇಕೆಂಬ ಉದ್ದೇಶದಿಂದ ನಗರದ ವ್ಯಕ್ತಿಯೊಬ್ಬರು ಮನೆ ಮನೆಗೆ ಸರಸ್ವತಿ ಪರಿಕಲ್ಪನೆಯಡಿ ಪುಸ್ತಕ ಮಾರಾಟಕ್ಕೆ ಮುಂದಾಗಿದ್ದಾರೆ.ಮನೆಗೊಂದು ಗ್ರಂಥಾಲಯ ತೆರೆಯಲಾಗುವುದು ಎಂದು ರಾಜ್ಯ ಪುಸ್ತಕ ಪ್ರಾಧಿಕಾರ ತಿಳಿಸಿದ್ದು, ಆ ಯೋಜನೆಯನ್ನು ಸಾಕಾರಗೊಳಿಸಲು ಕಳೆದ ಮೂರು ವರ್ಷಗಳಿಂದ ನಾಗೇಂದ್ರ ಎಂಬುವರು ಕೆಲಸ ಮಾಡುತ್ತಿದ್ದಾರೆ.
ತಣ್ಣೀರುಹಳ್ಳದ ನಿವಾಸಿ ಕಟ್ಟೆಮನೆ ನಾಗೇಂದ್ರ ಅವರು ಪುಸ್ತಕ ಮಾರಾಟದಲ್ಲಿ ತೊಡಗಿದ್ದು, ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕಗಳಿಗೆ ಶೇ. 20 ರಷ್ಟು ರಿಯಾಯಿತಿ ನೀಡುತ್ತಿದ್ದಾರೆ. ಎಲ್‌ಐಸಿ ಏಜೆಂಟರಾಗಿ ಕೆಲಸ ಮಾಡುತ್ತಿರುವ ಅವರು ಹಲವು ವರ್ಷಗಳಿಂದ ಪುಸ್ತಕ ಮಾರಾಟವನ್ನು ಉಪಕಸುಬು ಮಾಡಿಕೊಂಡಿದ್ದಾರೆ. ಪುಸ್ತಕೋದ್ಯಮ ಲಾಭದಾಯಕ ಕ್ಷೇತ್ರವಲ್ಲವೆಂದು ಇಲ್ಲಿ ಬಂಡವಾಳ ಹೂಡುವವರ ಸಂಖ್ಯೆ ಕಡಿಮೆ. ಆದರೆ ಯಾವುದೇ ಲಾಭದ ಅಪೇಕ್ಷೆ ಇಲ್ಲದೆ ಮಕ್ಕಳು, ಮಹಿಳೆಯರು ಹಾಗು ಯುವಕರಲ್ಲಿ ಪುಸ್ತಕ ಪ್ರೇಮ ಹಾಗು ಭಾಷಾಭಿಮಾನ ಹೆಚ್ಚಿಸಬೇಕೆಂಬ ತುಡಿತದಿಂದ ಪುಸ್ತಕ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ.
ಮನೆ ಮನೆಗೆ ಸರಸ್ವತಿ:
ಪ್ರತಿ ಮನೆಯಲ್ಲೂ ಪುಟ್ಟ ಗ್ರಂಥಾಲಯ ಇರಬೇಕೆಂಬ ನಿಟ್ಟಿನಲ್ಲಿ ಯೋಚಿಸಿರುವ ನಾಗೇಂದ್ರ ಅವರು ಮನೆ ಮನೆಗೆ ಸರಸ್ವತಿ ಎಂಬ ನೂತನ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಅಂದರೆ ಪ್ರತಿ ತಿಂಗಳು 300 ರೂ. ಪಾವತಿಸಬೇಕು. 10 ತಿಂಗಳು ಪೂರ್ಣಗೊಂಡ ಬಳಿಕ ವ್ಯಕ್ತಿಗೆ 3500 ರೂ. ಮೊತ್ತದ ಕನ್ನಡ ಪುಸ್ತಕಗಳನ್ನು ನೀಡುತ್ತಾರೆ. ಪ್ರತಿ ತಿಂಗಳು ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಲಾಟರಿಯಲ್ಲಿ ಹೆಸರು ಬರುವ ವ್ಯಕ್ತಿ ನಂತರ ಹಣ ಪಾವತಿಸುವಂತಿಲ್ಲ. ಅಂತಹವರಿಗೆ 3500 ರೂ. ಮೊತ್ತದ ಪುಸ್ತಕಗಳನ್ನು ಆರಂಭದಲ್ಲೇ ನೀಡಲಾಗುತ್ತದೆ. ಈ ಮೂಲಕ ಪುಸ್ತಕ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. 10 ತಿಂಗಳು ಮುಗಿದ ಬಳಿಕ ಹಣ ಪಾವತಿಸಿದ ಎಲ್ಲರಿಗೂ ಪುಸ್ತಕಗಳನ್ನು ನೀಡಲಾಗುತ್ತದೆ.
ಜೋಳಿಗೆ ಗ್ರಂಥಾಲಯ: ನಾಗೇಂದ್ರ ಅವರು ಯಾವುದೇ ಊರಿಗೆ ಹೋದರು ತಮ ಬ್ಯಾಗ್‌ನಲ್ಲಿ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ. ರಾಷ್ಟ್ರಾಭಿಮಾನ ಬೆಳೆಸುವ, ಮಕ್ಕಳಿಗೆ ಉಪಯುಕ್ತ ಪುಸ್ತಕಗಳನ್ನು ಜೊತೆಯಲ್ಲೂ ಇಟ್ಟುಕೊಳ್ಳುವ ಅವರು ಆಸಕ್ತರಿಗೆ ಓದಲು ನೀಡಿ ಇಂತಿಷ್ಟು ದಿನಗಳ ಬಳಿಕ ವಾಪಾಸ್ ಪಡೆಯುತ್ತಾರೆ. ಅದಕ್ಕೆ ಜೋಳಿಗೆ ಗ್ರಂಥಾಲಯ ಎಂಬ ಹೆಸರು ಕೊಟ್ಟಿದ್ದಾರೆ.
ಪುಸ್ತಕ ಓದುಗರನ್ನು ನೇರವಾಗಿ ತಲುಪಬೇಕೆಂಬ ಉದ್ದೇಶದಿಂದ ಮನೆ ಮನೆ ಭೇಟಿಯನ್ನು ಮುಂದುವರಿಸಿದ್ದಾರೆ. ಯಾರೇ ಪುಸ್ತಕ ಬೇಕೆಂದು ಕರೆ ಮಾಡಿದರೂ ನೇರವಾಗಿ ತಲುಪಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅವರ ಕಾರಿನ ಹಿಂಭಾಗ ಪುಸ್ತಕ ಇಡಲು ವ್ಯವಸ್ಥೆ ಮಾಡಿಕೊಂಡಿದ್ದು ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಅಂಗಡಿ ತೆರೆದು ಪುಸ್ತಕ ಮಾರಾಟ ಮಾಡುತ್ತಾರೆ.
ನಗರದ ಉತ್ತರ ಬಡಾವಣೆಯ ನಿವೇದಿತಾ ವೃತ್ತದ ಏಳುಕೋಟಿ ಕಾಂಪ್ಲೆಕ್ಸ್‌ನಲ್ಲಿ ಅದಮ್ಯ ಬುಕ್ಸ್ ಎಂಬ ಅಂಗಡಿ ತೆರೆದಿದ್ದು, ಆಸಕ್ತರು ಪುಸ್ತಕ ಖರೀದಿಸಬಹುದು. ಮಾಹಿತಿಗೆ 9448719579 ಇಲ್ಲಿಗೆ ಸಂಪರ್ಕಿಸಬಹುದು.