

ಹಾಸನ: ಪೊಲೀಸರ ಕಾರ್ಯಶೈಲಿ, ವೃತ್ತಿ ಜೀವನದಲ್ಲಿ ಅವರು ಎದುರಿಸುವ ಚಾಲೆಂಜನ್ನೇ ಕೇಂದ್ರೀಕರಿಸಿರುವ ಲಾಫಿಂಗ್ ಬುದ್ಧ ಸಿನಿಮಾ ಇದೇ ತಿಂಗಳ 300 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ತಿಳಿಸಿದರು.
ರಕ್ಷಿತ್ ಶೆಟ್ಟಿ ಫಿಲಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇದೊಂದು ಕುಟುಂಬ ಸಮೇತರಾಗಿ ನೋಡುವ ಸದಭಿರುಚಿಯ ಚಿತ್ರ,
ಹುದ್ದೆಗೆ ಆಯ್ಕೆಯಾಗುವಾಗ ಪೊಲೀಸರು ಫಿಟ್ ಆಗಿರುತ್ತಾರೆ. ತರುವಾಯ ಏಕೆ ದಪ್ಪಗಾಗುತ್ತಾರೆ, ಇದಕ್ಕೆ ಕಾರಣ ಏನು ಎಂಬುದರ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಇದು ಅತಿಯಾದ ತೂಕ ಇರುವ ಮುಖ್ಯಪೇದೆಯೊಬ್ಬರು ಹೇಗೆ ಪರಿಸ್ಥಿತಿಗಳನ್ನು ಸಂಭಾಳಿಸುತ್ತಾರೆ ಎಂಬುದನ್ನು ಹೇಳುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭರತ್‌ರಾಜ್ ಕತೆ ಬರೆದು ಚಿತ್ರ ನಿರ್ದೇಶನ ಮಾಡಿದ್ದಾರೆ. ಅನೇಕ ಗಂಟೆ ಸ್ಟೇಷನ್‌ನಲ್ಲೇ ಕುಳಿತು ಕತೆ ಬರೆದಿದ್ದಾರೆ. ಹೀಗಾಗಿ ಸಿನಿಮಾ ನೈಜವಾಗಿ ಮೂಡಿ ಬಂದಿದೆ ಎಂದರು. ಹಿಂದೆ ಸಾಂಗ್ಲಿಯಾನ ಮೊದಲಾದ ಸಿನಿಮಾಗಳು ಪೊಲೀಸ್ ಅಧಿಕಾರಿಯ ಸಾಹಸಗಾಧೆ, ಕರ್ತವ್ಯ ಶೈಲಿ, ಅಪರಾಧ ಪತ್ತೆ ಹಚ್ಚುವ ವಿಧಾನಗಳ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತಿತ್ತು. ಆದರೆ ನಮ್ಮ ಸಿನಿಮಾದಲ್ಲಿ ಯಾವುದೇ ಉದ್ಧಟತನ ಇಲ್ಲ. ಫಿಜಿಕಲಿ ಕಪ್ಪ ಇದ್ದರೂ, ನಗುಮೊಗದಿಂದಲೇ ವ್ಯಾಜ್ಯಗಳನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ. ಅವರೂ ಸಮಾಜದ ಒಳಿತಾಗಿ ಇರುವವರೇ ಎಂಬುದು ನಮ್ಮ ಚಿತ್ರದಲ್ಲಿದೆ ಎಂದರು. ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಇದೆ. ಅವರಿಗೂ ಮಹತ್ವ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯಲ್ಲೇ ಈ ಸಿನಿಮಾವೂ ಇದೆ. ನಮ್ಮ ಚಿತ್ರದಲ್ಲಿ ಇಡಿಯಾಗಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದು ನುಡಿದರು.
ನಟ ದಿಗಂತ್ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಮ್ಮ ಪಾತ್ರವೇ ಹಾಸ್ಯವಾಗಿದೆ. ಇಡೀ ದೃಶ್ಯ, ಸನ್ನಿವೇಶವೇ ಕಾಮಿಡಿ ಸೃಷ್ಟಿಸುತ್ತದೆ ಎಂದ ಅವರು, ನಮ್ಮ ಚಿತ್ರವನ್ನು ಪೊಲೀಸ್ ಇಲಾಖೆಗೆ ಅರ್ಪಣೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಸೃಜನೀತ್ ಶೆಟ್ಟಿ, ದೀಪಕ್‌ರಾಜ್, ಶ್ಯಾಂ ಸುಂದರ್, ಸ್ನೇಹಶ್ರೀ ಮೊದಲಾದವರಿದ್ದರು.