ಲಾನುಭವಿಗಳ ಅಯ್ಕೆಗೆ ಮಾನದಂಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ, ಜಿಲ್ಲಾಡಳಿತ ಭವನದಲ್ಲಿ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ

a1bdbd79-cedf-4252-848c-9697000d5064
Published on

ಬೆಂಗಳೂರು ಗ್ರಾಮಾಂತರ: ಯಾವುದೇ ಸರ್ಕಾರದ ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವ ಮುನ್ನಾ ಸೂಕ್ತ ಮಾನದಂಡ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಯಾವುದೇ ಯೋಜನೆಗಳು ಅನರ್ಹರ ಪಾಲಾಗಬಾರದು. ಇದರಿಂದ ಸರ್ಕಾರದ ಆಶಯವೇ ಬುಡಮೇಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೀಸಲಿಟ್ಟ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆ ಯೋಜನೆಯಲ್ಲಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಹಲವು ಬ್ಯಾಂಕ್‌ಗಳಲ್ಲಿ ಈ ಕುರಿತು ಸಮಸ್ಯೆಗಳಿದ್ದು, ಅಧಿಕಾರಿಗಳು ಖುದ್ದಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಬಳಿ ಚರ್ಚಿಸಿ, ಸಮಸ್ಯೆ ಬಗೆಹರಿಸುವ ಮೂಲಕ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು. ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕಿನಲ್ಲಿ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಸಬೇಕು. ಇದರಿಂದ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ಪರಿಹರಿಸಬಹುದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯ ನಡೆದಾಗ, ವಿಳಂಬ ತೋರದೆ ತಕ್ಷಣ ಪ್ರಕರಣ ದಾಖಲಿಸಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶೀಘ್ರ ಪರಿಹಾರಧನ ನೀಡಬೇಕು. ಅಂತರ್ಜಾತಿ ವಿವಾಹವಾದವರಿಗೆ ನಿಗದಿತ ಅವಧಿಯೊಳಗೆ ಪ್ರೋತ್ಸಾಹಧನ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದರು.

ಸ್ಮಶಾನಕ್ಕೆ ಮನವಿ: ಹೊಸಕೋಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಸಭೆಯ ಸದಸ್ಯರು ಜಿಲ್ಲಾಧಿಕಾರಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸ್ಮಶಾನಕ್ಕೆ ಸರ್ಕಾರಿ ಭೂಮಿಯನ್ನು ಗುರುತಿಸಿ, ಇಲ್ಲದಿದ್ದರೆ ಖಾಸಗಿಯವರಿಂದ ಜಮೀನು ಖರೀದಿಸಿ ವ್ಯವಸ್ತೆ ಮಾಡಬೇಕು ಎಂದು ಹೊಸಕೋಟೆ ತಹಸೀಲ್ದಾರ್ ಗೀತಾ ಅವರಿಗೆ ಸೂಚನೆ ನೀಡಿದರು.

ಹಲವು ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ನೀಡುವಂತೆ ಮನವಿ ಬಂದಿದ್ದು, ಸೂಕ್ತ ಜಾಗ ನೀಡಲಾಗುವುದು ಹಾಗೂ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಳವೆಬಾವಿಗೆ ಪೈಪ್ ನೀಡಿ: ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್, ಪಂಪ್, ಕೇಬಲ್ ಕೊಟ್ಟಿದ್ದಾರೆ. ಆದರೆ ಪೈಪ್ ನೀಡಿಲ್ಲ ಎಂದು ಡಿಸಿ ಅವರ ಗಮನಕ್ಕೆ ತಂದರು. ಇದರ ಸಲುವಾಗಿ ಟೆಂಡರ್ ಕರೆಯಬೇಕು ಹಾಗೂ ಶೀಘ್ರವಾಗಿ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸಬೇಕು ಎಂದು ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಡಿವೈಎಸ್ಪಿ ಟಿ.ರಂಗಪ್ಪ, ಡಿಡಿಪಿಐ ಗಂಗಮಾರೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net