

ಹಾಸನ: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ನಗರದ ಬಿ.ಎಂ. ರಸ್ತೆಯಲ್ಲಿರುವ ಗೋಕುಲ್ ಲಾಡ್ಜ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ರಂಗಸ್ವಾಮಿ (57) ಆತ್ಮಹತ್ಯೆಗೆ ಶರಣಾದ ಶಿಕ್ಷಕ.
ಬೇಲೂರು ತಾಲೂಕಿನ ತೊಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗಸ್ವಾಮಿ ಅವರು ಶನಿವಾರ ಗೋಕುಲ್ ಲಾಡ್ಜ್‌ನಲ್ಲಿ ರೂಮ್‌ನ್ನು ಬಾಡಿಗೆ ಪಡೆದುಕೊಂಡು ಉಳಿದುಕೊಂಡಿದ್ದರು.
ಭಾನುವಾರ ಬೆಳಗ್ಗೆ ಆದರೂ ಕೂಡ ಬಾಗಿಲು ತೆರೆದ ಕಾರಣ ಲಾಡ್ಜ್ ಸಿಬ್ಬಂದಿಗಳು ಬಾಗಿಲು ತೆಗೆದು ನೋಡಿದಾಗ ಶಿಕ್ಷಕ ರಂಗಸ್ವಾಮಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಕೆ.ಆರ್.ಪುರಂ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ರಂಗಸ್ವಾಮಿ ಮೂಲತಹ ಗಂಡಸಿ ಹೋಬಳಿಯ ಸಿದ್ದಾಪುರ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ನಗರದ ಹೌಸಿಂಗ್ ಬೋರ್ಡ್‌ನಲ್ಲಿ ವಾಸವಾಗಿದ್ದರು. ಇವರು ಬೇಲೂರು ತಾಲೂಕಿನಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿವೃತ್ತಿಯಾಗಲು ಇನ್ನೂ ಮೂರು ವರ್ಷ ಬಾಕಿ ಉಳಿದಿತ್ತು. ಆದರೆ ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆತ್ಮಹತ್ಯೆಯಾಗಿರುವ ಸ್ಥಳದಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನನ್ನ ಕ್ಷಮಿಸು ಮಗಳೇ ಎಂದು ಬರೆದಿಟ್ಟಿದ್ದಾರೆ. ಕೆಲವರಿಗೆ ಹಣ ಕೊಡಬೇಕಾಗಿದ್ದು, ಚೀಟಿಯಿಂದ ಹಣ ಬರಬೇಕಾಗಿದ್ದು, ಆ ಹಣದಿಂದ ಅವರಿಗೆ ಹಣ ನೀಡುವಂತೆ ತಿಳಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಓರ್ವ ಮಗ ಸಾವನಪ್ಪಿದ್ದು, ಅಲ್ಲಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಮೃತರಿಗೆ ಮಗಳು ಸೇರಿದಂತೆ ಪತ್ನಿ ಇದ್ದಾರೆ. ಈ ಸಂಬಂಧ ಕೆ.ಆರ್. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.