ಲಾಡಚಿಂಚೋಳಿಯಲ್ಲಿ ರೈತ ಆತ್ಮಹತ್ಯೆ

31KLB ALAND1
Published on

ಆಳಂದ: ಲಾಕ್ಡೌನ್ನಿಂದ ಯಾವುದು ಆಗಬಾರದು ಅಂದ್ಕೊಂಡಿದ್ದೇವೋ ಅದು ನಡೆದೇ ಹೋಗಿದೆ. ಕರೊನಾದಿಂದ ಮೊದಲ ಸಾವು ಆಗಿದ್ದು ಕಲಬುರಗಿಯಲ್ಲಿ. ಅದರಂತೆ ಲಾಕ್ಡೌನ್ ಎಫೆಕ್ಟ್ನಿಂದ ಜಿಲ್ಲೆಯ ಅನ್ನದಾತ ಮೊದಲ ಬಲಿಯಾಗಿದ್ದಾನೆ. ಇದಕ್ಕೆ ಕಾರಣ ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಮಾರಾಟ ಆಗದಿರುವುದು.
ಲಾಡಚಿಂಚೋಳಿ ರೈತ ಚಂದ್ರಕಾಂತ ಬಿರಾದಾರ (45) ನೇಣಿಗೆ ಶರಣಾಗಿದ್ದಾನೆ. ಈತ ತನ್ನ 8.13 ಎಕರೆಯಲ್ಲಿ ಮೂರು ಎಕರೆ ಕಲ್ಲಂಗಡಿ ಬೆಳೆದಿದ್ದ. ಇದಕ್ಕಾಗಿ ಬ್ಯಾಂಕ್ವೊಂದರಲ್ಲಿ 5.40 ಲಕ್ಷ ರೂ. ಸಾಲ ಮಾಡಿದ್ದ. ಖಾಸಗಿ ಸೇರಿ 11 ಲಕ್ಷ ರೂ. ಸಾಲವಿತ್ತು. ಬ್ಯಾಂಕಿನ ಮೊದಲ ಕಂತು 84 ಸಾವಿರ ರೂ. ಮೇ ತಿಂಗಳಲ್ಲಿ ಕಟ್ಟಲೇಬೇಕಿದೆ. ಆದರೀಗ ಲಾಕ್ಡೌನ್ನಿಂದಾಗಿ ಕಲ್ಲಂಗಡಿ ಎಲ್ಲೂ ಮಾರಾಟವಾಗದೆ ಕೊಳೆತು ಹೋಗುತ್ತಿರುವುದನ್ನು ಕಂಡು ಸೋಮವಾರ ರಾತ್ರಿ ತನ್ನ ಹೊಲದಲ್ಲಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಇಬ್ಬರು ಮಕ್ಕಳಿದ್ದಾರೆ. ರಾತ್ರಿ ಹೋದ ತಂದೆ ಬರದಿದ್ದಾಗ ಗಾಬರಿಗೊಂಡು ಮಂಗಳವಾರ ಬೆಳಗ್ಗೆ ಹೊಲಕ್ಕೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡಿತು. ಪಿಎಸ್ಐ ಉದ್ದಂಡಪ್ಪ ಮಣ್ಣೂರಕರ್ ಸ್ಥಳಕ್ಕೆ ಭೇಟಿ ನೀಡಿದ್ದು, ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಶಾಸಕ ಸುಭಾಷ ಗುತ್ತೇದಾರ್ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿ ಸಕರ್ಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಸೀಲ್ದಾರ್ ದಯಾನಂದ ಪಾಟೀಲ್ ಇದ್ದರು.
ಪರಿಹಾರ ಕೊಡಲು ವ್ಯವಸ್ಥೆ ಮಾಡುವುದಾಗಿ ಎಸಿ ಗಡದೆ ತಿಳಿಸಿದರು. ಕರೊನಾ ಭೀತಿ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದುದ್ದರಿಂದ ಕೇವಲ ಎಂಟು ಜನ ಸೇರಿ ಅಂತ್ಯಕ್ರಿಯೆ ನೆರವೇರಿಸಿ ಎಂದು ತಹಸೀಲ್ದಾರ್ ದಯಾನಂದ ಪಾಟೀಲ್ ಮನವರಿಕೆ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net