ಲಾಠಿ ಹಿಡಿದ ತಹಸೀಲ್ದಾರ್

11 lxr 1.
Published on

ಲಕ್ಷ್ಮೇಶ್ವರ: ದೇಶದಲ್ಲಿ ಲಾಕ್​ಡೌನ್ ಘೊಷಣೆಯಿದ್ದರೂ ಪಟ್ಟಣದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಮಾರುಕಟ್ಟೆಯಲ್ಲಿ ಸೇರಿದ್ದ ಜನಜಂಗುಳಿಯನ್ನು ಚದುರಿಸಲು ಸ್ವತಃ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರೇ ಲಾಠಿ ಹಿಡಿಯಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು.

ಕರೊನಾ ವೈರಾಣುವಿನ ಅಟ್ಟಹಾಸಕ್ಕೆ ಇಡೀ ಜಗತ್ತೇ ತಲ್ಲಣಿಸುತ್ತಿದ್ದರೂ ಪಟ್ಟಣದಲ್ಲಿ ಮಾತ್ರ ಶನಿವಾರ ಬೆಳಗ್ಗೆ ಪಟ್ಟಣ ಸೇರಿ ತಾಲೂಕಿನ ಜನತೆ ಯಾವ ಆತಂಕವೂ ಇಲ್ಲದೆ ದಿನಸಿ, ತರಕಾರಿ, ಹಣ್ಣು ಸೇರಿ ಇತರೆ ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾವಿರ ಸಂಖ್ಯೆಯಲ್ಲಿ ಸೇರಿದ್ದರು.

ಕಿಲ್ಲರ್ ಕರೊನಾ ಮಹಾಮಾರಿ ಹರಡದಂತೆ ತಡೆಯಲು ಎಲ್ಲರೂ ಮನೆಯಲ್ಲಿಯೇ ಇರುವುದು ಮತ್ತು ಸಾಮಾಜಿಕ ಅಂತರ ಕಾಯುವುದು ಅದಕ್ಕಾಗಿ ಇಡೀ ದೇಶವನ್ನೇ ಲಾಕ್​ಡೌನ್ ಘೊಷಿಸಿ ಕಟ್ಟುನಿಟ್ಟಿನ ಕ್ರಮದ ಜತೆಗೆ ದೇಶದ ಪ್ರಧಾನಿ ಸೇರಿ ಎಲ್ಲರೂ ಕೈ ಮುಗಿದು ಕೇಳಿದರೂ ಜನರು ಸ್ಪಂದಿಸುತ್ತಿಲ್ಲ ಎಂಬುದಕ್ಕೆ ಶನಿವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಸೇರಿದ್ಧ ಜನಜಂಗುಳಿ ಸಾಕ್ಷಿಯಾಗುವಂತಿತ್ತು.

ಜನ ಸಂದಣಿ ತಡೆಯಲು ನಿತ್ಯ ಬೆಳಗ್ಗೆ ತಹಸೀಲ್ದಾರರು ರೌಂಡ್ಸ್ ಹಾಕುತ್ತಿದ್ದಾರೆ. ಶನಿವಾರ ಮಾರುಕಟ್ಟೆಗೆ ಬಂದಾಗ ಸೇರಿದ್ದ ಜನರನ್ನು ಚದುರಿಸಲು ಸ್ವತಃ ತಾವೇ ಲಾಠಿ ಹಿಡಿದು ಜನರಿಗೆ ಬುದ್ಧಿ ಮಾತು ಹೇಳಿದರು. ನಿಯಮ ಪಾಲಿಸದ ಮತ್ತು ದಿನಸಿ ಹೊರತುಪಡಿಸಿ ವ್ಯಾಪಾರ ಮಾಡುತ್ತಿದ್ದ ಇತರೆ ಅಂಗಡಿಗಳನ್ನು ಬೀಗ ಹಾಕಿಸಿ ಲಾಕ್​ಡೌನ್ ಮುಗಿಯುವವರೆಗೂ ಬೀಗ ಕೊಡದಂತೆ ಪುರಸಭೆಯವರಿಗೆ ಸೂಚಿಸಿದರು.

ನಿತ್ಯ ಬೆಳಗ್ಗೆ 6 ರಿಂದ 9ರವರೆಗೆ ದಿನಸಿ ವ್ಯಾಪಾರಕ್ಕೆ ಮತ್ತು ತಳ್ಳು ಗಾಡಿಯಲ್ಲಿ ಮನೆ ಮನೆಗೆ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದಾಗ್ಯೂ ನಿತ್ಯ ಬೆಳಗ್ಗೆ 5.30 ರ ಹೊತ್ತಿಗೆ ವ್ಯಾಪಾರ-ವಹಿವಾಟು ಪ್ರಾರಂಭವಾಗಿರುತ್ತದೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಜನರು, ವ್ಯಾಪಾರಸ್ಥರು ಬೆಳಗಾಗುತ್ತಿದ್ದಂತೆಯೇ ದಾಂಗುಡಿ ಇಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಸೇರುವ ಜನದಟ್ಟಣೆ ತಡೆಯಲು ತಾಲೂಕಾಡಳಿತ ಸ್ಥಳೀಯ ಪುರಸಭೆ, ಪೊಲೀಸ್, ಸಂಘ-ಸಂಸ್ಥೆಗಳ ಸಹಕಾರದಲ್ಲಿ ಹತ್ತಾರು ಬದಲಾವಣೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನರ ಸಹಕಾರ ಸಿಗದೆ ಜನಸಂದಣಿ ಹೆಚ್ಚುತ್ತಲೇ ಇದೆ. ಬರುವ ಜನತೆ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯುತ್ತಿಲ್ಲ, ಎಷ್ಟೇ ಬುದ್ಧಿ ಹೇಳಿದರೂ ಕೇಳುತ್ತಿಲ್ಲ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್​ಐ ಶಿವಯೋಗಿ ಲೋಹಾರ, ಪುರಸಭೆ ಸಿಬ್ಬಂದಿ ಆನಂದ ಬದಿ, ಮಂಜು ಮುದಗಲ್, ಬಸವಣ್ಣೆಪ್ಪ ನಂದೆಣ್ಣವರ ಸೇರಿ ಸಂಘಟನೆಗಳ ಸ್ವಯಂ ಸೇವಕರು ಇದ್ದರು.

ಸೋಮವಾರದಿಂದ ಮಾರ್ಕೆಟ್ ಸಂಪೂರ್ಣ ಬಂದ್ : ರಾಜ್ಯದಲ್ಲಿ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಏನೆಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನರ ಸಹಕಾರ ಮುಖ್ಯವಾಗಿರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನರಿತು ಜನತೆ ನಿತ್ಯವೂ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಸೋಮವಾರದಿಂದ ಮಾರ್ಕೆಟ್ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ. ದಿನಸಿಯನ್ನೂ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳ ಜನರಿಗೆ ತಮ್ಮ ಗ್ರಾಮದಲ್ಲಿಯೇ ಜೀವನಾವಶ್ಯಕ ವಸ್ತುಗಳು ಲಭಿಸುವಂತೆ ಮಾಡಲಾಗುತ್ತಿದೆ. ಪಟ್ಟಣ ಪ್ರವೇಶಿಸುವ ಚೆಕ್​ಪೋಸ್ಟ್ ಮತ್ತು ಒಳ ರಸ್ತೆಗಳನ್ನು ಬಂದ್ ಮಾಡಲಾಗಿದೆ. ವಿನಾಕಾರಣ ಸಂಚರಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net