

ಲಕ್ಷ್ಮೇಶ್ವರ: ಲಾಕ್ಡೌನ್ ಘೊಷಣೆಯ ಮಧ್ಯೆಯೂ ವಿನಾಕಾರಣ ಸುತ್ತಾಡುವುದು, ತಾಲೂಕಾಡಳಿತ ವಿಧಿಸಿರುವ ಕಟ್ಟಳೆಗಳನ್ನು ಮೀರಿ ನಡೆದುಕೊಳ್ಳುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುವ ಮತ್ತು ಬಸ್ಕಿ ಹೊಡೆಸುವ, ಬೈಕ್ ವಶಪಡಿಸಿಕೊಳ್ಳುವ ಮೂಲಕ ಬಿಸಿ ಮುಟ್ಟಿಸುತ್ತಿದ್ದ ದೃಶ್ಯಗಳು ಗುರುವಾರ ಪಟ್ಟಣದ ಮಾರ್ಕೆಟ್ನಲ್ಲಿ ಸಾಮಾನ್ಯವಾಗಿ ಕಂಡು ಬಂದವು.
ನಿತ್ಯ ಬೆಳಗ್ಗೆ 6 ರಿಂದ 9 ರವರೆಗೆ ದಿನಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಬೈಕ್ಗಳು ಮಾರ್ಕೆಟ್ ಒಳಗೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ವೇಳೆ ಜನರು ಬೈಕ್, ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ ಮತ್ತು ಕೆಲವರು ಕಣ್ತಪ್ಪಿಸಿ ಮಾರ್ಕೆಟ್ ಒಳಗೆ ಬರುತ್ತಿದ್ದಾರೆ. ಇಂತವರಿಗೆ ಒಂದಿಷ್ಟು ಬಿಸಿ ಮುಟ್ಟಿಸಲು ಪೊಲೀಸರು ಕೆಲ ಬೈಕ್ಗಳ ಹವಾ ತೆಗೆದು, ಹಲವರಿಗೆ ಲಾಠಿ ರುಚಿ ತೋರಿಸಿದರು. ಕೆಲ ಬೈಕ್ಗಳನ್ನು ವಶಪಡಿಸಿಕೊಂಡರು. ಇನ್ನು ಸಾಮಾಜಿಕ ಅಂತರ ಕಾಯದ, ಮಾಸ್ಕ್ ಧರಿಸಿದವರಿಗೆ ಸಾರ್ವಜನಿಕವಾಗಿ ಬಸ್ಕಿ ತಗೆಸಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ವಿನಾಕಾರಣ ಸಂಚರಿಸುವ ವಾಹನಗಳ ನಿಯಂತ್ರಣಕ್ಕಾಗಿ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಬೆಳಗ್ಗೆ 9 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಳಿಕ ಕರೊನಾ ವಾರಿಯರ್ಸ್ ಪಡೆ ಮತ್ತು ರೈತರಿಗೆ ಮಾತ್ರ ಮಾಹಿತಿ ಪಡೆದು ಪೆಟ್ರೋಲ್ ಡೀಸೆಲ್ ಹಾಕಲಾಗುತ್ತಿದೆ. ಚೆಕ್ಪೋಸ್ಟ್ಗಳಲ್ಲಿ ನಿಗಾ ಇಡಲಾಗಿದೆ ಮಮತ್ತು ಪಟ್ಟಣದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಮೇ 3 ರವರೆಗೆ ಲಾಕ್ಡೌನ್ ಘೊಷಣೆಯಿದ್ದು ಯಾರೂ ಲಾಕ್ಡೌನ್ ಮುಗಿದಿದೆ ಎಂಬ ತಪ್ಪು ಮಾಹಿತಿಯಿಂದ ಮನೆಯಿಂದ ಹೊರಗೆ ಸಂಚರಿಸುವುದು, ನಿಯಮಗಳನ್ನು ಮೀರುವುದು ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಕರೊನಾ ವೈರಸ್ ನಿರ್ನಾಮಕ್ಕಾಗಿ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು ಎಲ್ಲರೂ ಪೊಲೀಸರ ಕಾರ್ಯಕ್ಕೆ ಸಹಕರಿಸಿ ಎಂದು ಪಿಎಸ್ಐ ಶಿವಯೋಗಿ ಲೋಹಾರ ತಿಳಿಸಿದ್ದಾರೆ.