ಲಾಠಿ ಏಟಿಗೆ ತತ್ತರಿಸಿದ ಕಲಬುರಗಿ ಜನ

Bundh-7
Published on

ಕಲಬುರಗಿ: ಅಯ್ಯೋ, ನಾನು ಮನೆಗೆ ಹೋಗುತ್ತಿದ್ದೇನೆ. ದಯವಿಟ್ಟು ಹೊಡೆಯಬೇಡಿ. ಹೀಗೆ ಅಂಗಲಾಚಿ ಬೇಡಿಕೊಂಡರೂ ಬೆಲೆ ನೀಡದ ಖಾಕಿಧಾರಿಗಳು ಬೆತ್ತ ಬೀಸುವುದನ್ನು ನಿಲ್ಲಿಸುತ್ತಾರೆಯೇ? ಊಹೂಂ ಇಲ್ಲ. ಜನರಿಗೆ ಹೊಡೆಯಿರಿ ಎಂದು ಸರ್ಕಾರವೇ ಹೇಳಿರುವಾಗ ನಾವೇಕೆ ಸುಮ್ಮನಿರಬೇಕು ಎಂಬ ನಿರ್ಧಾರಕ್ಕೆ ಕೆಲ ಪೊಲೀಸರು ಬಂದಂತಿದೆ.
ಕರೊನಾ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಭಯದ ವಾತಾವರಣ ಇರುವುದು ನಿಜ. ಈ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನು ಲಾಕ್ಡೌನ್ ಮಾಡಲಾಗಿದೆ. ಹೀಗಿರುವಾಗ ಜನತೆ ಹೊರಬರದೆ ತಮ್ಮ ಮನೆಯಲ್ಲೇ ಇರಬೇಕು. ಇದರಲ್ಲಿ ಎರಡು ಮಾತಿಲ್ಲ. ಅನಗತ್ಯವಾಗಿ ಓಡಾಡುವವರನ್ನು ಹತೋಟಿಗೆ ತರಲು ಲಾಠಿ ಬೀಸುವುದು ತಪ್ಪಲ್ಲ. ಆದರೆ ಲಾಠಿ ಬೀಸುವಾಗ ಮುಗ್ಧರನ್ನು ಟಾರ್ಗೆಟ್ ಮಾಡುವುದು ಎಷ್ಟು ಸರಿ ಎಂಬುದೇ ಈಗಿರುವ ಪ್ರಶ್ನೆ.
ನಗರದಲ್ಲಿ ಈಗಾಗಲೇ ಎಲ್ಲ ಕಡೆ ಬಂದ್ ವಾತಾವರಣವಿದೆ. ಬೆಳಗ್ಗೆ ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತು ಖರೀದಿಸಲು ಜನತೆ ನಿಗದಿಪಡಿಸಿದ ಸಮಯದಲ್ಲಿ ಹೊರಬರುತ್ತಿದ್ದಾರೆ. ಆಗ ಸಹಜವೇ ದಟ್ಟಣೆ ಆಗುತ್ತಿದೆ. ಎಲ್ಲಿಯೂ ಗುಂಪಾಗಿ ಸೇರಬಾರದು, ಸೇರಿದರೆ ಕರೊನಾಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹೇಳುತ್ತಲೂ ಬಂದಿದ್ದಾರೆ. ಇದನ್ನೇ ಪೊಲೀಸರು ತಿಳಿಸಿ ಹೇಳುವ ಮೂಲಕ ಜನರನ್ನು ಚದುರುವಂತೆ ಮಾಡಬಹುದು. ಆದರೆ ಹೊಡೆಯುವುದೇ ನನ್ನ ಧರ್ಮ, ಹೊಡೆಸಿಕೊಳ್ಳುವುದು ನಿಮ್ಮ ಕರ್ಮ ಎಂದು ಕೆಲ ಪೊಲೀಸರು ಮತ್ತು ಅಧಿಕಾರಿಗಳು ಭಾವಿಸಿದಂತಿದೆ.
ಹಾಗಂತ ಎಲ್ಲ ಪೊಲೀಸರು ಮತ್ತು ಅಧಿಕಾರಿಗಳು ಹಾಗಿಲ್ಲ. ನಗರದಲ್ಲಿ ಕೆಲ ಅಧಿಕಾರಿಗಳು ಮತ್ತು ಪೊಲೀಸರು ಜನತೆಗೆ ಕರೊನಾದಿಂದ ಆಗುವ ಅನಾಹುತ ಮತ್ತು ಹೇಗೆ ಜಾಗೃತರಾಗಿರಬೇಕು ಎಂಬೆಲ್ಲ ಅಂಶಗಳನ್ನು ತಿಳಿಹೇಳಿ ಮನೆಗಳಿಂದ ಹೊರಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಅಂಥದರಲ್ಲಿ ಕೈಯಲ್ಲಿ ಲಾಠಿ ಇದೆ ಎಂದು ಮನಬಂದಂತೆ ಹೊಡೆದು ಜನರ ಕಣ್ಣಲ್ಲಿ ನೀರು ಬರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಲಾಗುತ್ತಿದೆ.
ಪೊಲೀಸರೆದುರು ಮಾತನಾಡುವ ಧೈರ್ಯ ಇಲ್ಲದ ಜನತೆ ಅನಗತ್ಯವಾಗಿ ಏಟು ತಿನ್ನುತ್ತ, ಅಳುತ್ತ ಮನೆಗಳಿಗೆ ಬರುತ್ತಿದ್ದಾರೆ. ಹೊಡೆಯುವ ಮುನ್ನ ಪ್ರತಿ ವ್ಯಕ್ತಿಯ ಮಾಹಿತಿ ಅರಿತು ನಂತರ ಕಾರ್ಯಾಚರಣೆಗೆ ಇಳಿಯುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಪೊಲೀಸರು ಗಮನಹರಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡುವುದು ಸೂಕ್ತ.
ಮೊದಲು ಹೊಡೆದು ನಂತರ ಅವರ ಪರಿಚಯ ಮಾಡಿಕೊಳ್ಳುವುದು ಸರಿಯಲ್ಲ. ಅದರ ಬದಲಿಗೆ ಮೊದಲು ಪರಿಚಯ ಕೇಳಿ ಒಂದು ವೇಳೆ ಆತ ಪುಂಡನೋ, ಸಮಾಜ ಕಂಟಕನೋ, ಪೋಲಿಯೋ ಆಗಿದ್ದರೆ ಕ್ರಮ ಜರುಗಿಸಬಹುದು. ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನ ಮೇಲೆ ಸುಮ್ಮನೆ ಹೊರಟಿರುತ್ತಾರೆ. ಅಂಥವರ ಬೆನ್ನು ಹತ್ತಿ ಲಾಠಿಯಿಂದ ಹೊಡೆಯುವುದನ್ನು ಕೆಲ ಖಾಕಿಧಾರಿಗಳು ಮಾಡುತ್ತಿದ್ದಾರೆ. ಇದರಿಂದ ಅನೇಕರು ವಾಹನಗಳಿಂದ ಕೆಳಗಡೆ ಬೀಳುವುದೂ ಉಂಟು. ಈ ವೇಳೆ ಅವರಿಗೆ ಗಾಯವಾದರೆ, ಜೀವಕ್ಕೆ ಹೆಚ್ಚೂ-ಕಡಿಮೆಯಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಬರುತ್ತದೆ.

ಗೃಹ ಸಚಿವರ ಹೇಳಿಕೆ
ಕರೊನಾದಿಂದ ಜನರನ್ನು ತಡೆಗಟ್ಟುವುದು ಸೂಕ್ತ. ಇದಕ್ಕಾಗಿ ಲಾಠಿಯನ್ನೇ ಬೀಸಬೇಕು ಎಂದೇನಲ್ಲ. ಅದರ ಬದಲಿಗೆ ಜನರಿಗೆ ತಿಳಿಸಿ ಹೇಳುವ ಕೆಲಸ ಆಗಬೇಕು ಎನ್ನುತ್ತಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net