

ಉಡುಪಿ: ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಭಾಗವಾಗಿರುವ ಕರಾವಳಿಯ ಹೋಟೆಲ್ ಉದ್ಯಮ ಕೋವಿಡ್ ಎರಡನೇ ಅಲೆಯಿಂದ ಮತ್ತಷ್ಟು ತತ್ತರಿಸುವಂತಾಗಿದೆ. ಪರಿಣಾಮ ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಹೋಟೆಲ್ ನೌಕರರ ಬದುಕು ಅತಂತ್ರವಾಗಿದೆ.
ಜಿಲ್ಲೆಯಲ್ಲಿ ಹೊಟೆಲ್ ಉದ್ಯಮ ಪ್ರಮುಖ ಉದ್ಯೋಗ ಸೃಷ್ಟಿಯ ಭಾಗವು ಆಗಿದೆ. ಅಡುಗೆಯವರು, ವೈಟರ್, ಅಡುಗೆ ಸಹಾಯಕ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗದ ನೌಕರರು ಹೊಟೆಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗದವರು, ಸಣ್ಣಪುಟ್ಟ ಅಂಗ ವೈಕಲ್ಯ ಇರುವರಿಗೂ ಹೋಟೆಲ್‌ಗಳಲ್ಲಿ ಕೆಲಸ ಕೊಡಲಾಗುತ್ತದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ ಊಟ, ತಿಂಡಿ, ಸಹಿತ ನೌಕರರಿಗೆ ಉತ್ತಮ ವೇತನ ಸಿಗುತ್ತಿದೆ. ಸ್ವಚ್ಛತಾ ಸಿಬ್ಬಂದಿಗೆ ದಿನಕ್ಕೆ 400-500 ರೂ, ಸಿಗುತ್ತದೆ. ಈ ವಿಭಾಗದಲ್ಲಿ ಮಹಿಳೆಯರೂ ಹೆಚ್ಚಾಗಿ ದುಡಿಯುತ್ತಾರೆ. ಉಡುಪಿ ಸೇರಿದಂತೆ ಹೊರ ಜಿಲ್ಲೆಯವರು ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪಾರ್ಸೆಲ್ ಸೇವೆ ಒದಗಿಸುತ್ತಿರುವ ಹೋಟೆಲ್‌ಗಳು ಸೀಮಿತ ನೌಕರರನ್ನಷ್ಟೆ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಕೆಲವರು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೆ.
ಶೇ.30ರಷ್ಟು ಹೊಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ: ಜಿಲ್ಲೆಯಲ್ಲಿ ಮಲ್ಟಿಕಸಿನ್ ಫ್ಯಾಮಿಲಿ ರೆಸ್ಟೋರೆಂಟ್, ಸಣ್ಣ ಕ್ಯಾಂಟೀನ್‌ಗಳು, ಗಾಡಿ ಕ್ಯಾಂಟೀನ್, ಮೀನೂಟದ ಹೋಟೆಲ್, ಫಾಸ್ಟ್‌ಫುಡ್ ಸೆಂಟರ್ ಸಹಿತ 2500ಕ್ಕೂ ಹೆಚ್ಚು ಹೋಟೆಲ್‌ಗಳು ಇವೆ. ಜನತಾ ಕರ್ಫ್ಯೂ ನಡುವೆ ಹೊಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಮುಂದುವರಿದಿದೆ. ಶೇ.30ರಷ್ಟು ಹೋಟೆಲ್‌ಗಳಲ್ಲಿ ಮಾತ್ರ ಪಾರ್ಸೆಲ್ ಸೇವೆ ನೀಡಲಾಗುತ್ತಿದ್ದು, ಬಹುತೇಕ ಹೋಟೆಲ್‌ಗಳು ಪಾರ್ಸೆಲ್‌ನಿಂದ ಸಿಬ್ಬಂದಿ ವೇತನ, ಖರ್ಚು, ನಿರ್ವಹಣೆ ಸಾಧ್ಯವಿಲ್ಲ ಎಂದು ಸಂಪೂರ್ಣ ಬಂದ್ ಮಾಡಿವೆ.
ಮಾಲೀಕರ ನೆರವು: ಉದ್ಯಮ ನಷ್ಟದ ಜತೆಗೆ ನೌಕರರ ಜೀವನ ಸಂಕಷ್ಟದ ಬಗ್ಗೆಯೂ ಹೋಟೆಲ್ ಮಾಲೀಕರು ಚಿಂತಿತರಾಗಿದ್ದಾರೆ. ಪಾರ್ಸೆಲ್ ಸೇವೆ ಒದಗಿಸುತ್ತಿರುವ ಕೆಲವು ಹೋಟೆಲ್ ಮಾಲೀಕರು ಸಂಪೂರ್ಣ ವೇತನ ನೀಡಲು ನಿರ್ಧರಿಸಿದ್ದಾರೆ. ಸಂಪೂರ್ಣ ಬಂದ್ ಇರುವರು ಅರ್ಧ ವೇತನ ಜತೆಗೆ, ಮನೆ ಖರ್ಚಿಗೆ ಹಣಕಾಸು ಸಹಾಯ ಮಾಡುತ್ತಿದ್ದಾರೆ. ಇದೆ ರೀತಿ ಲಾಕ್‌ಡೌನ್ ಮುಂದುವರಿದರೆ ಮಾಲೀಕರಾದರೂ ಎಲ್ಲಿಂದ ತಂದುಕೊಡಬೇಕು ಎಂದು ಹೋಟೆಲ್ ನೌಕರರು ಹೇಳುತ್ತಾರೆ.
ಈ ಕರ್ಫ್ಯೂ ಅವಧಿಯಲ್ಲಿ ಹೋಟೆಲ್‌ನಲ್ಲಿ ವ್ಯವಹಾರ ಇಲ್ಲದಿದ್ದರೂ, ಅರ್ಧ ವೇತನ ಭರವಸೆ, ಮನೆ ಖರ್ಚಿಗೆ ಮಾಲೀಕರು ಸಹಕಾರ ನೀಡುತ್ತಿದ್ದಾರೆ. ಬಹುತೇಕ ನೌಕರರು ವೇತನ, ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಮುಂದಿನ ಬದುಕು ಹೇಗೆಂದು ಅರ್ಥವಾಗುತ್ತಿಲ್ಲ. ಪ್ರಮೋದ್ ಉಡುಪಿಯ ಹೋಟೆಲೊಂದರ ನೌಕರ ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ಹೋಟೆಲ್ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಕೋವಿಡ್ ಎರಡನೇ ಅಲೆ ಪರಿಣಾಮ ಉದ್ಯಮ ಸಂಪೂರ್ಣ ನಷ್ಟಕ್ಕೆ ದೂಡಿದ್ದು, ಮಾಲೀಕರು ಸೇರಿದಂತೆ ನೌಕರರ ಬದುಕು ಕಷ್ಟಕ್ಕೆ ಸಿಲುಕಿದೆ. ನೌಕರರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿವರೆಗೂ ಆರ್ಥಿಕ ಸಂಕಷ್ಟದ ನಡುವೆ ಕೆಲವು ಹೋಟೆಲ್ ಮಾಲೀಕರು ಸಹಾಯಹಸ್ತ ಚಾಚಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾದಲ್ಲಿ ಇದು ಕಷ್ಟವಾಗಲಿದೆ. ಈ ಬಗ್ಗೆ ಸರ್ಕಾರ ಪರಾಮರ್ಶಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ