ಲಾಕ್​ಡೌನ್​ನಲ್ಲಿ ಜೀವ ಪಡೆದ ‘ನಮ್ಮ ಕೆರೆ’

10 vikram 1
Published on

ವಿಕ್ರಮ ನಾಡಿಗೇರ ಧಾರವಾಡ

ಸರ್ಕಾರದ ಜಾಗದಲ್ಲಿನ ಕೆರೆ ಅತಿಕ್ರಮಣ ಮಾಡುವವರಿಗೆ ಬರವಿಲ್ಲ. ಆದರೆ, ಈ ಬಡಾವಣೆ ಜನ ಮಾತ್ರ ಹಲವು ವರ್ಷಗಳಿಂದ ಮುಚ್ಚಿ ಹೋಗಿದ್ದ ಕೆರೆಗೆ ಮುರುಜೀವ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿ ಈ ಕಾರ್ಯ ನಡೆದಿದೆ. ಸರ್ಕಾರದ 1 ಎಕರೆ 5 ಗುಂಟೆ ಜಾಗದಲ್ಲಿದ್ದ ಕೆರೆ ಕೆಲ ವರ್ಷಗಳಿಂದ ಮುಚ್ಚಿಹೋಗಿತ್ತು. ಅತಿಕ್ರಮಣ ಪ್ರಯತ್ನವೂ ನಡೆದಿತ್ತು. ಹೀಗಾಗಿ ಬಡಾವಣೆ ಜನರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಕೆಲಸ ಆಗಿರಲಿಲ್ಲ. ಲಾಕ್​ಡೌನ್ ಅವಧಿಯಲ್ಲಿ ಬಡಾವಣೆ ಜನರು ಸರ್ಕಾರದ ಅನುದಾನ ಇಲ್ಲದೆ ತಾವೇ ಅಂದಾಜು 3 ಲಕ್ಷ ರೂ. ಖರ್ಚು ಮಾಡಿ ಕೆರೆಗೆ ಮರುಜೀವ ನೀಡಿ ‘ನಮ್ಮ ಕೆರೆ’ ಎಂದು ನಾಮಕರಣ ಮಾಡಿದ್ದಾರೆ!

ಬಸವೇಶ್ವರ ಬಡಾವಣೆ, ಗುರುದೇವನಗರ, ನಂದಿನಿ ಲೇಔಟ್ ಹಾಗೂ ಶಾಖಾಂಬರಿ ನಗರದ ಜನರೇ ಹಣ ನೀಡಿದ್ದಾರೆ. ಇದಲ್ಲದೆ ‘ನಮ್ಮ ಕೆರೆ’ ಹೆಸರಿನಲ್ಲಿ ಸಮಿತಿ ಸಹ ರಚಿಸಿ ಕೆರೆಯ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕೆರೆ ಜಾಗ ಅತಿಕ್ರಮಣ ತಡೆದು ಪುನರುಜ್ಜೀವನಗೊಳಿಸಲು 2012ರಿಂದಲೇ ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರು. ಆದರೆ ಕ್ರಮಕೈಗೊಳ್ಳದ ಕಾರಣಕ್ಕೆ ಶಾಸಕರಿಗೂ ಮನವಿ ಸಲ್ಲಿಸಿದ್ದರು. ಅವರೂ ಅನುದಾನವಿಲ್ಲ ಎಂದಿದ್ದರು. ಹೀಗಾಗಿ, ಕರೊನಾ ಲಾಕ್​ಡೌನ್ ಅವಧಿಯಲ್ಲಿ ನಿವಾಸಿಗಳೇ ಕೆರೆ ನಿರ್ವಣಕ್ಕೆ ಮುಂದಾದರು. ನಾಗರಿಕರು ಹಣ ನೀಡಲು ಒಪ್ಪಿದ್ದರಿಂದ 10 ದಿನಗಳಲ್ಲೇ ಕೆರೆ ಸಿದ್ಧವಾಗಿದೆ!

ಜೆಸಿಬಿ ಹಾಗೂ ಹಿಟಾಚಿ ಬಳಸಿ ಸುಮಾರು 10 ಅಡಿ ಆಳದ ಕೆರೆ ನಿರ್ವಿುಸಿದ್ದಾರೆ. ಇದಾದ ಕೆಲ ದಿನಗಳಲ್ಲೇ ಉತ್ತಮ ಮಳೆಯಾಗಿ ತಕ್ಕಮಟ್ಟಿನ ನೀರಿನ ಶೇಖರಣೆಯೂ ಆಗಿದೆ. ಕೆರೆಗೆ ಚರಂಡಿ ನೀರು ಸೇರದಂತೆ ಮುನ್ನೆಚ್ಚರಿಗೆ ವಹಿಸಲಾಗಿದ್ದು, ಪರಿಸರ ದಿನದಂದು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿಗಳನ್ನೂ ನೆಟ್ಟಿದ್ದಾರೆ. ಈ ಜನರ ಕಾರ್ಯಕ್ಕೆ ಸರ್ಕಾರವೂ ಕೈ ಜೋಡಿಸಿದರೆ ಮುಂದಿನ ದಿನಗಳಲ್ಲಿ ಸುಂದರ ತಾಣವಾಗುವಲ್ಲಿ ಸಂದೇಹವೇ ಇಲ್ಲ.

ಇಲಾಖೆಗಳಲ್ಲಿ ಅನುದಾನವಿದ್ದರೂ ಅನೇಕ ಸಲ ಸದ್ವಿನಿಯೋಗಕ್ಕೆ ಅಧಿಕಾರಿಗಳು ಮನಸ್ಸು ಮಾಡುವುದಿಲ್ಲ. ಮನಸ್ಸು ಮಾಡಿದರೆ ದುಪ್ಪಟ್ಟು ಹಣ ಖರ್ಚು ಮಾಡುವ ಉದಾಹರಣೆಗಳೂ ಇವೆ. ಆದರೆ, ಈ ಬಡಾವಣೆಗಳ ಜನರು ಕಡಿಮೆ ಖರ್ಚಿನಲ್ಲಿ ಕೆರೆ ನಿರ್ವಿುಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಸರ್ಕಾರಿ ಜಾಗ ಬೇರೆಯವರ ಪಾಲಾಗದಂತೆ ಸರಿಯಾದ ತಡೆಯನ್ನೂ ಒಡ್ಡಿದ್ದಾರೆ.

ಕೆಲ ವರ್ಷಗಳಿಂದ ಕೆರೆ ನಿರ್ವಣಕ್ಕೆ ಮನವಿ ಸಲ್ಲಿಸಿದ್ದರೂ ಕೆಲಸವಾಗಿಲ್ಲ. ಕೆರೆ ಜಾಗ ಒತ್ತುವರಿಗೆ ಕೆಲವರು ಪ್ರಯತ್ನಿಸಿದ್ದರು. ಹೀಗಾಗಿ ಲಾಕ್​ಡೌನ್​ನಲ್ಲಿ ಸರ್ಕಾರದ ಅನುದಾನವಿಲ್ಲದೆ ನಿವಾಸಿಗಳೇ ಹಣ ಹಾಕಿ ಕೆರೆ ನಿರ್ವಿುಸಿದ್ದೇವೆ. ಸರ್ಕಾರ ಕೆರೆ ಸುತ್ತಲೂ ಪಾದಚಾರಿ ಮಾರ್ಗ ನಿರ್ವಿುಸಿದರೆ ವಾಯು ವಿಹಾರಕ್ಕೂ ಅನುಕೂಲವಾಗಲಿದೆ.|ಶಿವಶರಣ ಕಲಬಶೆಟ್ಟರ್, ಬಸವೇಶ್ವರ ಬಡಾವಣೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net