ಲಾಕ್​ಡೌನ್ ಸಡಿಲಿಕೆಗೆ ಮುಂದಾದ ಜಿಲ್ಲಾಡಳಿತ

29-gdg-1
Published on

ಗದಗ: ಜಿಲ್ಲೆಯಲ್ಲಿ ಒಟ್ಟು ಐದು ಕರೊನಾ ವೈಸರ್ ಪ್ರಕರಣಗಳು ಪತ್ತೆಯಾಗಿದ್ದು ಎಲ್ಲ ಐದು ಕೇಸ್​ಗಳು ಗದಗ ನಗರದಲ್ಲಿ ಇರುವುದರಿಂದ ಜಿಲ್ಲೆಯಲ್ಲಿ ಗದಗ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಸರ್ಕಾರದ ನಿರ್ದೇಶನದ ಮೇರೆಗೆ ಕೋವಿಡ್ ಪ್ರಕರಣಗಳು ಇಲ್ಲದಿರುವ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು, ಗಣಿಗಾರಿಕೆ, ಅಂಗಡಿ ಮುಂಗಟ್ಟು ತೆರೆಯಲು ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಐದೂ ಕೇಸ್​ಗಳು ಗದಗ ನಗರದಲ್ಲಿ ಇರುವುದರಿಂದ ಉಳಿದ ತಾಲೂಕುಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಯಾವುದೇ ತೊಂದರೆ ಇಲ್ಲ. ಆದರೂ, ಈ ವಿಷಯದಲ್ಲಿ ಜಿಲ್ಲಾಡಳಿತ ಅಳೆದುತೂಗಿ ನಿರ್ಣಯ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ನಗರದಲ್ಲಿ ಐದು ಕೇಸ್​ಗಳು ಪತ್ತೆಯಾದರೂ ಸಹ ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಬುಧವಾರ ಜನರು ಸಂಚರಿಸುತ್ತಿರುವುದು ಕಂಡುಬಂದಿತು. ಬ್ಯಾಂಕ್, ಎಪಿಎಂಸಿ, ಮಡಿಕಲ್ ಶಾಪ್, ಸೂಪರ್ ಮಾರ್ಕೆಟ್​ಗಳು, ಕಿರಾಣಿ, ಹಾಲು, ಹಣ್ಣಿನ ವ್ಯಾಪಾರ ಎಂದಿನಂತೆ ನಡೆಯಿತು. ಕೆಲವೆಡೆ ಆಟೋಮೊಬೈಲ್, ಕೋಲ್ಡ್ ಡ್ರಿಂಕ್ಸ್ ಸೇರಿ ಮತ್ತಿತರ ಅಂಗಡಿಗಳು ಕೆಲಹೊತ್ತು ತೆರೆದಿದ್ದವು. ಜಿಲ್ಲಾಡಳಿತ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ದಿನಸಿ ಸಾಮಗ್ರಿಗಳ ಖರೀದಿಗೆ ಅಂಗಡಿಗಳಿಗೆ ತೆರಳುವ ಜನರು ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೆಲವರು ಮಾಸ್ಕ್ ಧರಿಸದೆ ಬರುತ್ತಾರೆ. ಅನೇಕ ಯುವಕರು ಸಕಾರಣವಿಲ್ಲದೆ ಬೈಕ್ ಏರಿ ಸುತ್ತಾಡುವುದು ನಡೆದಿದೆ. ಇಂತಹ ಎಲ್ಲ ಚಟುವಟಿಕೆಗಳಿಗೆ ಇನ್ನಷ್ಟು ದಿನ ಕಡಿವಾಣ ಹಾಕಬೇಕಾಗಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪತ್ತೆಯಾದ ಒಂದರಿಂದ ನಾಲ್ಕನೇ ಪ್ರಕರಣಗಳು ನಗರದ ರಂಗನವಾಡಿ ಗಲ್ಲಿಯ ನಿವಾಸಿಗಳಾಗಿದ್ದು, ಐದನೇ ಪ್ರಕರಣದ ಪಿ 514 ನಗರದ ಗಂಜಿ ಬಸವೇಶ್ವರ ಓಣಿ ನಿವಾಸಿಯಾಗಿದ್ದಾರೆ. ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಸೋಂಕು ಹೇಗೆ ತಗುಲಿತು ಎಂಬುದು ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮೂಲ ಹುಡುಕುವ ಪ್ರಯತ್ನ ಮುಂದುವರಿಸಿದೆ. ಐದನೇ ಕೇಸ್ ಸೋಂಕಿತರ ಮನೆಯಲ್ಲಿ 9 ಜನರು ವಾಸವಾಗಿದ್ದು, ಅವರೆಲ್ಲರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಜತೆಗೆ ಪಿ 514 ಪ್ರಕರಣದ ಪ್ರಥಮ ಸಂಪರ್ಕದಲ್ಲಿದ್ದ 25 ಜನರು ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 118 ಜನರ ಗಂಟಲ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳಿಸಲಾಗಿದೆ. ಸದ್ಯ ಇದರಲ್ಲಿ 13 ಜನರ ವರದಿ ನೆಗೆಟಿವ್ ಬಂದಿದೆ.

ಕರೊನಾ ವೈರಸ್ ಸೋಂಕಿತ ಪಿ 514 ರೋಗಿ ವಾಸಿಸುತ್ತಿದ್ದ ಗಂಜಿ ಬಸವೇಶ್ವರ ಓಣಿಯ ಸುತ್ತಮುತ್ತಲಿನ 500 ಮೀ. ವ್ಯಾಪಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೊಷಿಸಿದ್ದು, ಅಗತ್ಯ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಗಂಜಿ ಬಸವೇಶ್ವರ ಓಣಿ ಸಂರ್ಪಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಂಗಳವಾರ ನಗರದ ಗಂಜಿ ಬಸವೇಶ್ವರ ಓಣಿಯ ನಿವಾಸಿಗೆ ಸೋಂಕು ದೃಢಪಟ್ಟ ಮೇಲೆ ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೋವಿಡ್ 19 ಲಾಕ್​ಡೌನ್ ಪರಿಸ್ಥಿತಿಯಲ್ಲಿ ಕೆಲವು ಷರತ್ತುಗಳೊಂದಿಗೆ ಜಿಲ್ಲೆಯಲ್ಲಿ ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಗದಗ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಷರತ್ತು ಬದ್ಧ ವ್ಯಾಪಾರ ವಹಿವಾಟಿಗೆ ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಲಾಗುತ್ತಿದೆ. ಗದಗ-ಬೆಟಗೇರಿ ನಗರ ವ್ಯಾಪ್ತಿಯಲ್ಲಿ ಒಟ್ಟಾರೆ ಐದು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ಪ್ರದೇಶಗಳನ್ನು ಜಿಲ್ಲಾಡಳಿತ ನಿರ್ಬಂಧಿತ ಪ್ರದೇಶವೆಂದು ಘೊಷಿಸಿದೆ. ರಾಜ್ಯ ಸರ್ಕಾರ ನಿರ್ಬಂಧಿಸಿರುವ ಬಾರ್, ರೆಸ್ಟೋರೆಂಟ್, ಕ್ರೀಡೆ, ಬಟ್ಟೆ ವ್ಯಾಪಾರ, ಕ್ಷೌರಿಕ ಅಂಗಡಿ ಹೊರತುಪಡಿಸಿ ಸಾಮಾನ್ಯ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ನಿರ್ಬಂಧಿತ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿರುವುದಿಲ್ಲ. |ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

25,080 ನೋಂದಾಯಿತ ಕಟ್ಟಡ ಕಾರ್ವಿುಕರು

ಗದಗ: ಕೋವಿಡ್ 19 ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್​ಡೌನ್ ಅವಧಿಯಲ್ಲಿ ಬಡವರು, ನಿರ್ಗತಿಕರು ಹಾಗೂ ಕೆಲಸಕ್ಕಾಗಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ವಿುಕರಿಗಾಗಿ ಕಾರ್ವಿುಕ ಇಲಾಖೆಯು ಹಲವಾರು ಕಾರ್ಯಕ್ರಮ ಜಾರಿಗೊಳಿಸಿದೆ.

ಗದಗ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲ ಕಟ್ಟಡ ಕಾರ್ವಿುಕರು ಹಾಗೂ ಅಸಂಘಟಿತ ವಲಯದ ಕಾರ್ವಿುಕರು ಹಾಗೂ ವಿವಿಧ ರಾಜ್ಯ, ಜಿಲ್ಲೆಗಳ ವಲಸೆ ಕಾರ್ವಿುಕರು, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವಲಯದ ಕಾರ್ವಿುಕರಿಗೆ ಮಾಸ್ಕ್, ಸಾಬೂನು ಮತ್ತು ಸ್ಯಾನಿಟೈಸರ್ ಕಿಟ್​ಗಳನ್ನು ನೀಡಲಾಗಿದೆ. ಕರಪತ್ರ ಮೂಲಕ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 25,080 ನೋಂದಾಯಿತ ಕಟ್ಟಡ ಕಾರ್ವಿುಕರಿದ್ದು, 20,075 ಕಾರ್ವಿುಕರ ಬ್ಯಾಂಕ್ ಖಾತೆಗಳ ವಿವರವನ್ನು ಕಾರ್ವಿುಕ ಇಲಾಖೆಗೆ ಸಲ್ಲಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಸಹಾಯವಾಣಿಯಲ್ಲಿ ದಾಖಲಾಗುವ ಕೋರಿಕೆಯನ್ವಯ ಸಂಕಷ್ಟಕ್ಕೀಡಾಗಿರುವ ಕಾರ್ವಿುಕರ ಸ್ಥಳಗಳಿಗೆ ತೆರಳಿ ಸಿದ್ಧಪಡಿಸಿದ ಆಹಾರ ಅಥವಾ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗಿದೆ. ಕೆಎಂಎಫ್ ಧಾರವಾಡ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಇರುವ ಕಟ್ಟಡ ಮತ್ತು ಇತರೆ ನಿರ್ವಣ, ವಲಸೆ ಬಂದ ವಿವಿಧ ರಾಜ್ಯದ ಕಾರ್ವಿುಕರಿಗೆ ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಹೊರ ರಾಜ್ಯದ ಒಟ್ಟು 629 ಕಾರ್ವಿುಕರು ಪತ್ತೆಯಾಗಿದ್ದಾರೆ. ಇದರಲ್ಲಿ 321 ಕಾರ್ವಿುಕರಿಗೆ ಗುತ್ತಿಗೆದಾರರ ಮೂಲಕ ಕಾರ್ಯ ಸ್ಥಳಗಳಲ್ಲಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದು, ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಉಳಿದ 308 ಜನ ವಲಸೆ ಕಾರ್ವಿುಕರಲ್ಲಿ 24 ಜನ ಅಸಂಘಟಿತ ಕಾರ್ವಿುಕರಿಗೆ ನಗರದ ಪ್ರಸಾದ ವಸತಿ ನಿಲಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ತಲಾ 12 ಜನರಂತೆ ಕಾರ್ವಿುಕ ಇಲಾಖೆ ವತಿಯಿಂದ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

308 ವಲಸೆ ಕಾರ್ವಿುಕರ ಬೇಡಿಕೆಗಳಿಗನುಸಾರವಾಗಿ ಆಹಾರ ಧಾನ್ಯಗಳ ಕಿಟ್ ಪೂರೈಸಲಾಗುತ್ತಿದೆ. ಈಗಾಗಲೇ ಕರೊನಾ ವಾರಿಯರ್ಸ್​ಗಳಿಗೆ ಕಾರ್ವಿುಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗದಗ ವತಿಯಿಂದ ತರಬೇತಿ ನೀಡಿದ್ದು, ಅಗತ್ಯಕ್ಕೆ ಅನುಗುಣವಾಗಿ ಆಯ್ಕೆಯಾದವರಿಗೆ ಗುರುತಿನ ಚೀಟಿ ಹಾಗೂ ಸುರಕ್ಷಾ ಕಿಟ್​ಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ ತಿಳಿಸಿದ್ದಾರೆ.

ಕಂಟೈನ್​ವೆುಂಟ್ ಪ್ರದೇಶದಲ್ಲಿ ಭಾರಿ ಭದ್ರತೆ

ಗದಗ: ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ.20ರ ಗಂಜಿ ಬಸವೇಶ್ವರ ವೃತ್ತದ ಭಾಗಗಳ ಸುತ್ತಲಿನ 100 ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಮತ್ತು ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಘೊಷಿಸಲಾಗಿದೆ. ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಅವರನ್ನು ಇನ್ಸಿಂಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ.

ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಗಳಿಗೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಂಟೈನ್ಮೆಂಟ್ ಪ್ರದೇಶದ ಸುತ್ತ ಘೊಷಣೆ ಮಾಡಲಾದ 5 ಕಿ.ಮೀ. ಬಫರ್ ಜೋನ್​ನ ಮೊದಲ 1 ಕಿ.ಮೀ ಸುತ್ತಳತೆಯ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಜನರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ನಿಯಂತ್ರಿತ ವಲಯಗಳಲ್ಲಿ ಎಲ್ಲ ದಿನಸಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಔಷಧ ಸೇರಿ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಲಾಗುವುದು. ನಿಯಂತ್ರಿತ ವ್ಯಾಪ್ತಿ ಪ್ರದೇಶಗಳಲ್ಲಿ ಧಾರ್ವಿುಕ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವಿಕೆ, ಸಭೆ ಅಥವಾ ಮದುವೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಿತ ಇಲಾಖೆಗಳ ಮೂಲಕವೇ ಪಡೆಯಬೇಕು. ಖಾಸಗಿ ಮೂಲಗಳಿಗೆ ಅವಕಾಶವಿಲ್ಲ, ಈ ಪ್ರದೇಶಗಳ ಜನರು ಮನೆ ಬಿಟ್ಟು ಹೊರಗೆ ತಿರುಗುವುದನ್ನು ನಿಷೇಧಿಸಲಾಗಿದೆ.

ಈ ಪ್ರದೇಶಗಳ ಎಲ್ಲ ಶಾಲಾ, ಕಾಲೇಜ್, ಕಚೇರಿಗಳನ್ನು ಮುಚ್ಚಲು, ಜನಗುಂಪು ಸೇರುವಿಕೆ, ವಾಹನ ಸಂಚಾರವನ್ನು (ಕರ್ತವ್ಯ ನಿರತ ವಾಹನ ಹೊರತುಪಡಿಸಿ) ನಿರ್ಬಂಧಿಸಿದೆ. ಕಂಟೈನ್ಮೆಂಟ್, ಬಫರ್ ಝೋನ್ ಮತ್ತು ಕ್ಲಸ್ಟರ್​ಗಳಲ್ಲಿ ಕರೊನಾ ವೈರಸ್ ನಿಯಂತ್ರಿಸುವ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲಾಧಿಕಾರಿ ಕರ್ತವ್ಯಗಳನ್ನು ನಿಗದಿಪಡಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net