

ಗದಗ: ನಗರದಲ್ಲಿ ವೃದ್ಧೆಯೊಬ್ಬರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಜಿಲ್ಲಾಡಳಿತ ಲಾಕ್ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಿದರೂ ಜನರು ಪಡಿತರ ಧಾನ್ಯ ಹಾಗೂ ತರಕಾರಿ ಖರೀದಿಗಾಗಿ ಮುಗಿಬೀಳುವುದು ಬುಧವಾರವೂ ಮುಂದುವರಿಯಿತು.
ನಗರದ ಎಪಿಎಂಸಿಯಲ್ಲಿ ನಿರ್ವಿುಸಿರುವ ತಾತ್ಕಾಲಿಕ ತರಕಾರಿ ಮಾರ್ಕೆಟ್ ಮತ್ತು ಬೆಟಗೇರಿ ತರಕಾರಿ ಮಾರ್ಕೆಟ್ನಲ್ಲಿ ಜನರು ಯಾವುದೇ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅಕ್ಕಪಕ್ಕ ನಿಂತುಕೊಂಡೇ ತರಕಾರಿ ಖರೀದಿಸಿದರು. ಮುಖಕ್ಕೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನಿತ್ಯ ಮನವಿ ಮಾಡಿಕೊಳ್ಳುತ್ತಿದ್ದರೂ ಜನರ ನಿರ್ಲಕ್ಷ್ಯ ಮುಂದುವರಿದಿದ್ದು ಕಂಡು ಬಂತು.
ಸ್ಥಳದಲ್ಲಿ ಪೊಲೀಸರು ಇದ್ದಾಗ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪೊಲೀಸರು ಕಣ್ಮರೆಯಾದರೆ ಬೇಕಾಬಿಟ್ಟಿಯಾಗಿ ವರ್ತಿಸುವುದು ಮಾಮೂಲಾಯಿತು. ಈ ಕುರಿತು ವ್ಯಾಪಾರಸ್ಥರು ಸಹ ಸಾರ್ವಜನಿಕರಿಗೆ ಏನನ್ನೂ ಹೇಳುತ್ತಿಲ್ಲ. ಹೀಗಾಗಿ ಲಾಕ್ಡೌನ್ ಉದ್ದೇಶವೇ ಈ ತರಕಾರಿ ಮಾರುಕಟ್ಟೆಯಲ್ಲಿ ಮಾಯವಾಗಿದೆ.
ಬ್ಯಾಂಕ್ ಮುಂದೆ ಕ್ಯೂ:
ಲಾಕ್ಡೌನ್ ಘೊಷಿಸಿದ್ದರಿಂದ ಕೇಂದ್ರ ಸರ್ಕಾರ ಜನ ಧನ ಖಾತೆಗೆ 500 ರೂ. ಜಮಾ ಮಾಡಿದೆ. ಆ ಹಣ ತೆಗೆದುಕೊಳ್ಳಲು ಕಳೆದ ಎರಡು ದಿನಗಳಿಂದ ನಗರದ ವಿವಿಧ ಬ್ಯಾಂಕ್ಗಳ ಮುಂದೆ ಖಾತೆದಾರರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರೇ ಸರದಿಯಲ್ಲಿ ನಿಲ್ಲುತ್ತಿದ್ದು, ಗುಂಪಾಗಿ ಸೇರಿ ಮಾತುಕತೆ ಆರಂಭಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಬ್ಯಾಂಕ್ಗಳ ಮುಂದೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದಂತೆ ಕಾಣಿಸಲಿಲ್ಲ. ಬ್ಯಾಂಕ್ ಅಧಿಕಾರಿಗಳ ಸಹ ನಿಯಮ ಪಾಲಿಸುವಂತೆ ಗ್ರಾಹಕರಿಗೆ ತಿಳಿಸುತ್ತಿಲ್ಲ.
ನಗರದ ಹಾತಲಗೇರಿ ನಾಕಾ ಬಳಿಯ ಕೆವಿಜಿ ಬ್ಯಾಂಕ್ ಮುಂದೆ ಜನ ಧನ ಹಣ ಪಡೆಯುವ ಸಲುವಾಗಿ ಜನರು ಗುಂಪಾಗಿ ನಿಂತಿದ್ದರು. ಜತೆಗೆ ಅಂಚೆ ಕಚೇರಿ ಮುಂದೆ ಪಿಂಚಣಿ, ವೃದ್ಧಾಪ್ಯ ವೇತನಕ್ಕಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸರದಿಯಲ್ಲಿ ನಿಂತಿದ್ದರು.
ಜನಜಂಗುಳಿ ಆಗದಂತೆ ನೋಡಿಕೊಳ್ಳಿ:
ಗದಗದಲ್ಲಿ ವೃದ್ಧೆಗೆ ಕರೊನಾ ಸೋಂಕು ದೃಢಪಟ್ಟ ನಂತರ ಜನ ಧನ ಖಾತೆದಾರರಿಗೆ ಬ್ಯಾಂಕ್ ಪ್ರತಿನಿಧಿ ಮೂಲಕ ಮನೆಗಳಿಗೆ ಹಣ ತಲುಪಿಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಅವರು ಮಂಗಳವಾರ ನೀಡಿದ್ದ ಆದೇಶ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಪೊಲೀಸರು, ಜಿಲ್ಲಾಡಳಿತ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಬ್ಯಾಂಕ್ ಮುಂದೆ ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಪೆಟ್ರೋಲ್ಗಾಗಿ ಪರದಾಟ:
ಗದಗ- ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಪೆಟ್ರೋಲ್ಗಾಗಿ ಜನರು ಪರದಾಡಿದರು. ಜಿಲ್ಲೆಯಲ್ಲಿ ಕರೊನಾ ಸೋಂಕು ಪಾಸಿಟಿವ್ ಬಂದಿದ್ದರಿಂದ ಲಾಕ್ಡೌನ್ ಬಿಗಿಗೊಳಿಸಿದ್ದರಿಂದ ಬಂಕ್ಗಳಲ್ಲಿ ಪೆಟ್ರೋಲ್ ಹಾಕಲಿಲ್ಲ. ಹೀಗಾಗಿ ಜನರು ಪೆಟ್ರೋಲ್ಗಾಗಿ ಸುತ್ತಾಡಿ ನಿರಾಸೆಯಿಂದ ಮನೆಗೆ ಮರಳಿದರು. ಕರೊನಾ ಸೋಂಕು ಪತ್ತೆ ನಂತರ ಬೇಕಾಬಿಟ್ಟಿಯಾಗಿ ಎಲ್ಲ ವಾಹನಗಳಿಗೂ ಇಂಧನ ಹಾಕುವುದಿಲ್ಲ. ಕರೊನಾ ತಡೆಗಟ್ಟುವ ಸಲುವಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ವಾಹನಗಳು, ಪೊಲೀಸ್ ವಾಹನಗಳಗೆ ಮಾತ್ರ ಇಂಧನ ಹಾಕಲಾಗುತ್ತಿದೆ. ಬೆಟಗೇರಿ ಮತ್ತು ಗದಗದಲ್ಲಿ ತಲಾ ಒಂದೊಂದು ಬಂಕ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ವಾಹನ ತಪಾಸಣೆ ಬಿಗಿ:
ಕರೊನಾ ಸೋಂಕು ಪತ್ತೆಯಾದ ನಂತರ ಜಿಲ್ಲೆಯಲ್ಲಿರುವ 18 ಚೆಕ್ ಪೋಸ್ಟ್ಗಳಲ್ಲಿ ವಾಹನ ತಪಾಸಣೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರತಿಯೊಂದು ವಾಹನದ ನಂಬರ್ ಬರೆದಿಟ್ಟುಕೊಳ್ಳಲಾಗುತ್ತಿದೆ. ಜತೆಗೆ ಜಿಲ್ಲಾಡಳಿತ ಸಂಚಾರಕ್ಕಾಗಿ ನೀಡಿರುವ ಅಧಿಕೃತ ಪಾಸ್ ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲೆ ಪ್ರವೇಶಿಸುವ ಮತ್ತು ಜಿಲ್ಲೆಯಿಂದ ಹೊರಹೋಗುವ ಪ್ರತಿ ವಾಹನವನ್ನೂ ಬುಧವಾರದಿಂದ ಅತ್ಯಂತ ಮುತುವರ್ಜಿಯಿಂದ ತಪಾಸಣೆ ಮಾಡಲಾಗುತ್ತಿದೆ.
ಪಡಿತರ ವಿತರಣೆಯಲ್ಲೂ ಅದೇ ಕತೆ!:
ಅವಳಿ ನಗರದ ಪಡಿತರ ವಿತರಣೆಯಲ್ಲೂ ಅದೇ ಕತೆ. ಜನರು ಸಾಮಾಜಿಕ ಅಂತರ ನಿಯಮ ಪಾಲಿಸುತ್ತಿಲ್ಲ. ಮುಖಕ್ಕೆ ಮಾಸ್ಕ್ ಧರಿಸದೇ ಮನಬಂದಂತೆ ವರ್ತಿಸಿದರು. ನಗರದಲ್ಲಿ ಕರೊನಾ ಸೋಂಕು ಪತ್ತೆಯಾದರೂ ಜನರಿಗೆ ಬುದ್ಧಿ ಬಂದಂತೆ ಕಾಣಿಸುತ್ತಿಲ್ಲ. ಮಹಿಳೆಯರು, ಮಕ್ಕಳು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಮೇಲೆ ಪಡಿತರಕ್ಕಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ಬರಬಾರದು. ನ್ಯಾಯಬೆಲೆ ಅಂಗಡಿ ಮಾಲೀಕರೇ ಜನರ ಮನೆ ಬಾಗಿಲಿಗೆ ತಂದು ಆಹಾರ ಧಾನ್ಯ ನೀಡುತ್ತಾರೆ ಎಂದು ಜಿಲ್ಲಾಡಳಿತ ಘೊಷಿಸಿತ್ತು. ಆದರೆ, ಬುಧವಾರ ಜಿಲ್ಲಾಡಳಿತದ ಆದೇಶ ಜಾರಿಗೊಂಡಂತೆ ಕಾಣಿಸಲಿಲ್ಲ.
ಮೂರ್ಛೆ ಬಂದ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿದ ಎಸ್ಪಿ
ಗದಗ ಎಪಿಎಂಸಿ ತರಕಾರಿ ಮಾರ್ಕೆಟ್ನಲ್ಲಿ ವ್ಯಕ್ತಿಯೊಬ್ಬ ಮೂರ್ಛೆ ಹೋಗಿ ಕುಸಿದು ಬಿದ್ದಿದ್ದನ್ನು ಗಮನಿಸಿದ ಎಸ್ಪಿ ಯತೀಶ ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದರು. ಪಂಚಾಕ್ಷರಿ ನಗರದ ಶಿವಾನಂದ ಎಂಬುವರು ದಿಢೀರ್ ಆಗಿ ಕುಸಿದು ಬಿದ್ದರು. ಎಸ್ಪಿ ಯತೀಶ ಅವರು ಉಪಚರಿಸಿ ಅವರನ್ನು ಆಟೋ ಮೂಲಕ ಆಸ್ಪತ್ರೆಗೆ ಕಳುಹಿಸಿದರು.
ಇ ಟೆಂಡರ್ ಆರಂಭ:
ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಏ. 14ರವರೆಗೆ ಪ್ರತಿಬಂಧಕಾಜ್ಞೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಅಭಾವವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಲಾಲರು, ಖರೀದಿದಾರರು ಇ ಟೆಂಡರ್ ನಡೆಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಷರತ್ತುಗಳೊಂದಿಗೆ ಅನುಮತಿ ನೀಡಿದ್ದಾರೆ.
ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ದಲಾಲರ, ಖರೀದಿದಾರರ ಅಂಗಡಿಗಳನ್ನು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರದಂದು ಮಾತ್ರ ತೆರೆಯಬೇಕು. ಎಪಿಎಂಸಿ ಕಾರ್ಯದರ್ಶಿಯವರು ಅಂಗಡಿಯಲ್ಲಿ ದಾಸ್ತಾನು ಇದ್ದರೆ ಮಾತ್ರ ಒಂದು ದಲಾಲಿ, ಖರೀದಿ ಅಂಗಡಿಗೆ ಒಂದು ಪಾಸ್ ನೀಡಬೇಕು. ಪಾಸ್ ಅವಧಿ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಂಸ್ಕರಣಾ ಘಟಕಗಳನ್ನು ಪರಿವೀಕ್ಷಿಸಿ ಸಂಸ್ಕರಣೆ ಚಟುವಟಿಕೆ ಅಥವಾ ದಾಸ್ತಾನು ಚಾಲ್ತಿಯಲ್ಲಿದ್ದರೆ ಮಾತ್ರ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಪಾಸ್ ವಿತರಿಸಬೇಕು. ಸಂಸ್ಕರಣೆ ಘಟಕದ ಕಾರ್ಯವನ್ನು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಮಾತ್ರ ನಿರ್ವಹಿಸಬೇಕು. ಪಾಸ್ಗಳನ್ನು ಬೇರೆಯವರಿಗೆ ವರ್ಗಾಯಿಸಬಾರದು. ಸಂಸ್ಕರಣೆ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಾಗೂ ಹಮಾಲರಿಗೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಇತರ ಸುರಕ್ಷಿತ ವಸ್ತ್ರಗಳನ್ನು ನೀಡಬೇಕು. ಸಂಸ್ಕರಣೆ ಘಟಕಗಳಲ್ಲಿ ಸಂಸ್ಕರಿಸಿದ ದವಸ- ಧಾನ್ಯಗಳನ್ನು ನಿಯಮಾನುಸಾರ ಸಂಬಂಧಪಟ್ಟವರಿಂದ ಪರವಾನಗಿ ಪಡೆದುಕೊಂಡು ರವಾನೆ ಮಾಡಬೇಕು. ಪೇಟೆ ಜನರು ಕಡ್ಡಾಯವಾಗಿ ಮಾಸ್ಕ್ ಹಾಗೂ ಇತರ ಸುರಕ್ಷಿತ ವಸ್ತ್ರಗಳನ್ನು ಉಪಯೋಗಿಸಿ ರೋಗಾಣು ಹರಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.