ಲಾಕ್​ಡೌನ್ ಬಿಗಿ, ಚೆಕ್​ಪೋಸ್ಟ್​ಗಳಲ್ಲಿ ಜ್ವರ ಪರೀಕ್ಷೆ

h11-Bankapur Chouk 1
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ನಂತರ ನಗರದಾದ್ಯಂತ ಶನಿವಾರ ಲಾಕ್ ಡೌನ್ ಆದೇಶ ಜಾರಿಯನ್ನು ಬಿಗಿಗೊಳಿಸಿದ್ದು, ಚೆಕ್​ಪೋಸ್ಟ್​ಗಳಲ್ಲಿ ಹೊರ ಜಿಲ್ಲೆಗಳ ವಾಹನ ಚಾಲಕರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.

ಸ್ತಬ್ಧತಾ ಆದೇಶ ಜಾರಿಗೊಂಡಾಗಿನಿಂದಲೂ ಚೆಕ್ ಪೋಸ್ಟ್ ಗಳಲ್ಲಿ ಹೊರ ಜಿಲ್ಲೆಗಳ ವಾಹನ ಚಾಲಕರು ಹಾಗೂ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್​ಅನ್ನು ಕಡ್ಡಾಯವಾಗಿ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು.

ಕೊನೆಗೂ ಜಿಲ್ಲಾಡಳಿತ ತಪಾಸಣೆ ನಾಕಾಗಳಲ್ಲಿ ವ್ಯಕ್ತಿಗಳ ತಾಪಮಾನ ಪರೀಕ್ಷೆಗೆ ಮುಂದಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸೇರಿ ಇತರ ಇಲಾಖೆ ಸಿಬ್ಬಂದಿಯನ್ನು ಶುಕ್ರವಾರ ಸಂಜೆಯಿಂದಲೇ ನೇಮಿಸಿದೆ.

ಸೋಂಕಿತ ವ್ಯಕ್ತಿಯ ಮನೆ ಇರುವ ಡಾಕಪ್ಪ ವೃತ್ತದ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆ ಪ್ರದೇಶವನ್ನು ಕಂಟೈನ್​ವೆುಂಟ್ (ಸೋಂಕು ಸಾಧ್ಯತಾ) ಪ್ರದೇಶ ಎಂದು ಗುರುತಿಸಿರುವುದರಿಂದ ಶುಕ್ರವಾರ ಅಪರಾಹ್ನದಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆಗಳ ಮಧ್ಯೆ ಬ್ಯಾರಿಕೇಡ್​ಗಳನ್ನು ನಿಲ್ಲಿಸಿ, ಹಗ್ಗ ಹಾಗೂ ನಟ್ ಬೋಲ್ಟ್​ಗಳಿಂದ ಬಿಗಿಯಲಾಗಿದೆ.

ಈ ಮೊದಲು ವಾಹನ ಸಂಚಾರ ಹೆಚ್ಚು ಕಾಣುತ್ತಿದ್ದ ಚನ್ನಮ್ಮ ವೃತ್ತ, ಸವೋದಯ ವೃತ್ತ, ವಿದ್ಯಾನಗರ, ಗೋಕುಲ ರಸ್ತೆ, ಸ್ಟೇಶನ್ ರಸ್ತೆ ಸೇರಿ ಪ್ರಮುಖ ಮಾರ್ಗಗಳಲ್ಲಿ ಶನಿವಾರ ವಾಹನ ಹಾಗೂ ಜನ ಸಂಚರ ವಿರಳವಾಗಿತ್ತು. ಅಗತ್ಯ ಸೇವೆಯಲ್ಲಿ ತೊಡಗಿರುವ ವಾಹನಗಳಷ್ಟೇ ಸಂಚರಿಸುತ್ತಿರುವುದು ಕಂಡುಬಂದಿತು.

ಅನಗತ್ಯವಾಗಿ ರಸ್ತೆಗೆ ಇಳಿದ ಕೆಲ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ದ್ರಾವಣ ಸಿಂಪಡಣೆ: ಕರೊನಾ ಸೋಂಕಿತ ಮನೆ ಇರುವ ಡಾಕಪ್ಪ ವೃತ್ತದ ಮುಲ್ಲಾ ಓಣಿಯಲ್ಲಿ ರಾಸಾಯನಿಕ ದ್ರವ ಸಿಂಪಡಿಸಲಾಗಿದೆ.

ಇಡಿ ಬಡಾವಣೆಯ ಮನೆಗಳು ಬಾಗಿಲು ಮುಚ್ಚಿದ್ದರಿಂದ ಎಲ್ಲೆಡೆ ಬಿಕೋ ಎನ್ನುವ ವಾತಾವರಣ ಕಂಡುಬಂತು. ಪೊಲೀಸರನ್ನು ಹೊರತು ಪಡಿಸಿ ಬೀದಿಗಳಲ್ಲಿ ಇನ್ಯಾರೂ ಕಂಡುಬರಲಿಲ್ಲ.

ಡಾಕಪ್ಪ ವೃತ್ತ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ಪಡಿತರ ವಿತರಿಸುವ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ. ಬಾಕಿ ಇರುವವರ ಪಡಿತರ ಗ್ರಾಹಕರಿಗೆ ನಿತ್ಯ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಮೊಬೈಲ್ ಕರೆ ಮಾಡಿ, ನಿಗದಿತ ಸಮಯದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಬಡಾವಣೆಯಲ್ಲಿ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ವರ್ತಕರ ಸಭೆ

ಶನಿವಾರ ಬೆಳಗ್ಗೆ ಅವಳಿ ನಗರದ ಹೋಲ್​ಸೇಲ್ ಹಾಗೂ ರಿಟೇಲ್ ದಿನಸಿ ವ್ಯಾಪಾರಸ್ಥರ ಸಭೆ ಕರೆದಿದ್ದ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಗ್ರಾಹಕರ ಮನೆ ಬಾಗಿಲಿಗೆ ದಿನಸಿ ಪೂರೈಸುವಂತೆ ಸೂಚಿಸಿದರು. ಬಡಾವಣೆಯಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟು ಕಳುಹಿಸಿ. ಗ್ರಾಹಕರು ಫೋನ್ ಮೂಲಕ ಹೇಳುವ ದಿನಸಿ ಸಾಮಗ್ರಿಯನ್ನು ಅವರ ಮನೆ ಬಾಗಿಲಿಗೇ ತಲುಪಿಸಿ, ಜನಜಂಗುಳಿ ಸೇರುವುದನ್ನು ತಪ್ಪಿಸಲು ಸಹಕರಿಸಿ ಎಂದು ಸೂಚಿಸಿದರು.

ಡಾಕಪ್ಪ ವೃತ್ತ ಸುತ್ತಲಿನ ಸಮೀಕ್ಷೆ ಮುಕ್ತಾಯದ ಹಂತಕ್ಕೆ

ಹುಬ್ಬಳ್ಳಿ: ಕರೊನಾ ಸೋಂಕಿತ ವ್ಯಕ್ತಿಯ ನಿವಾಸ ಇರುವ ಹುಬ್ಬಳ್ಳಿ ಡಾಕಪ್ಪ ವೃತ್ತದಿಂದ 3 ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಕಂಟೈನ್​ವೆುಂಟ್ (ಸೋಂಕು ಸಂಭಾವ್ಯ) ಪ್ರದೇಶ ಎಂದು ಪರಿಗಣಿಸಲಾಗಿದೆ. ವೃತ್ತದಿಂದ 1 ಕಿ.ಮೀ. ಸುತ್ತಳತೆ ಪ್ರದೇಶವನ್ನು ಹೆಚ್ಚು ಸೂಕ್ಷ್ಮ ಎಂದು ಪರಿಗಣಿಸಿದ್ದು, ಆದ್ಯತೆ ಮೇಲೆ ಅಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ.

ಭಾನುವಾರ ಈ ಸಮೀಕ್ಷೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಸರ್ವೆ ನಡೆಸುವ ಪ್ರತಿ ತಂಡದಲ್ಲಿ ತಲಾ ಒಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದಾರೆ. ಒಟ್ಟು 250 ಜನ ಸಿಬ್ಬಂದಿ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ತಿಳಿಸಿದ್ದಾರೆ. ನಿತ್ಯ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರತಿ ತಂಡ 50 ಮನೆಗಳ ಸರ್ವೆ ಕಾರ್ಯ ನಡೆಸುತ್ತಿದೆ.

ಸರ್ವೆ ಸಮಯದಲ್ಲಿ ಆಯಾ ಕುಟುಂಬದಲ್ಲಿರುವ ಜನರ ಸಂಖ್ಯೆ, ಆಯಾ ಮನೆಗೆ ಬೇರೆ ಊರಿನಿಂದ ಬಂದವರ ಮಾಹಿತಿ, ಆಯಾ ಕುಟುಂಬದಿಂದ ಬೇರೆ ಊರಿಗೆ ಹೋದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸಮೀಕ್ಷೆಗೆ ಯಾರಾದರೂ ಅಡ್ಡಿಪಡಿಸಿದರೆ ತಕ್ಷಣ 100 ಸಂಖ್ಯೆಗೆ ಕರೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ ‘ವಿಜಯವಾಣಿ’ ಗೆ ತಿಳಿಸಿದ್ದಾರೆ.

ಫೀವರ್ ಕ್ಲಿನಿಕ್ ಕಾರ್ಯವಿಧಾನ ಪರಿಶೀಲನೆ

ಧಾರವಾಡ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ನಗರದಲ್ಲಿ ಸ್ಥಾಪಿಸಿರುವ ಫಿವರ್ ಕ್ಲಿನಿಕ್​ಗಳ ಕಾರ್ಯವಿಧಾನವನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ತೇಜಸ್ವಿನಗರದ ಪುರೋಹಿತನಗರದಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ ಸಚಿವ, ಫೀವರ್ ಕ್ಲಿನಿಕ್​ನ ಕಾರ್ಯವಿಧಾನ ಪರಿಶೀಲಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ನೋವಲ್ ಕರೊನಾ ಸೋಂಕು ಲಕ್ಷಣ ಇರುವ ಸಾರ್ವಜನಿಕರಿಗೆ ನಗರ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಮಾನವ ಸಂಪನ್ಮೂಲದಿಂದ ಫೀವರ್ ಕ್ಲಿನಿಕ್​ಗಳನ್ನು ನಡೆಸಲಾಗುತ್ತದೆ. ಕ್ಲಿನಿಕ್​ಗೆ ಅವಶ್ಯಕ ಆರೋಗ್ಯ ಸಲಕರಣೆ ಮತ್ತು ಸಾಮಗ್ರಿಗಳಾದ ಥರ್ಮಲ್ ಸ್ಕ್ಯಾನರ್, ಎನ್ 95 ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸುರಕ್ಷಾ ಕವಚಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಅನುದಾನದಲ್ಲಿ ಭರಿಸಲಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ ಮಾತನಾಡಿ, ಜಿಲ್ಲಾ ಆಸ್ಪತ್ರೆ, ಮದಾರಮಡ್ಡಿ, ಬಾರಾಕೊಟ್ರಿ, ಪುರೋಹಿತನಗರ, ಹುಬ್ಬಳ್ಳಿಯ ಕಿಮ್ಸ್ನಲ್ಲಿ 2 ಹಾಗೂ ಚಿಟಗುಪ್ಪಿ ಸಾರ್ವಜನಿಕ ಆಸ್ಪತ್ರೆ ಸೇರಿ 7 ಕಡೆಗಳಲ್ಲಿ ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗಿದೆ. ಕ್ಲಿನಿಕ್​ಗಳ ನಿರ್ದಿಷ್ಟ ಮಾರ್ಗಸೂಚಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿದ್ದಾರೆ ಎಂದರು.

ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಪರಶುರಾಮ ಎಫ್.ಕೆ., ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net