

ಭದ್ರಾವತಿ: ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ತಬ್ಲಿಘಿಗಳಿಂದ 8 ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಮತ್ತೊಂದೆಡೆ ನಗರದಲ್ಲಿ ದಿನೇ ದಿನೆ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿರುವ ಜನತೆ ಲಾಕ್ಡೌನ್ ನಿಯಮ ಪಾಲಿಸದೇ ಅಡ್ಡಾಡುತ್ತಿರುವುದು ಮತ್ತಷ್ಟು ಭೀತಿ ಹುಟ್ಟಿಸಿದೆ.
ತಾಲೂಕು ಆಡಳಿತದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಒಂದಿಬ್ಬರಿಗೆ 50, 100 ರೂ. ದಂಡ ಹಾಕಿ ಸುಮ್ಮನಾಗಿದ್ದಾರೆ.
ಹೊರ ರಾಜ್ಯ ಜಿಲ್ಲೆ ಹಾಗೂ ತಾಲೂಕುಗಳಿಂದ ಆಗಮಿಸಿರುವವರಿಗೆ 28 ದಿನಗಳ ಹೋಮ್ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆಯಾದರೂ ಅದನ್ನು ಯಾರೂ ಸರಿಯಾಗಿ ಪಾಲಿಸುತ್ತಿಲ್ಲ. ಮನೆ ಮುಂದೆ ಭಿತ್ತಿಪತ್ರಗಳನ್ನು ಅಂಟಿಸಿದ್ದರೂ ಬೆಂಗಳೂರಿನಿಂದ ಕೆ.ಎಚ್.ನಗರಕ್ಕೆ ಆಗಮಿಸಿರುವ ವ್ಯಕ್ತಿಯೊಬ್ಬ ಮನೆಯಲ್ಲಿರದೆ ಅಂತರಗಂಗೆ ಸೇರಿ ಇನ್ನಿತರೆ ಭಾಗಗಳಲ್ಲಿ ಓಡಾಡಿಕೊಂಡಿದ್ದಾನೆ ಎಂದು ಅಲ್ಲಿನ ಸ್ಥಳೀಯರು ದೂರಿದ್ದಾರೆ.