

ಧಾರವಾಡ: ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿರುವ ಲಾರಿ ಚಾಲಕರಿಗೆ ಊಟದ ತೊಂದರೆ ಆಗುತ್ತಿರುವುದನ್ನು ಗಮನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಚಾಲಕರಿಗೆ ಶನಿವಾರದಿಂದ ಊಟದ ವ್ಯವಸ್ಥೆ ಪ್ರಾರಂಭಿಸಿದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಿರುವ ತೇಗೂರು ಹಾಗೂ ತಡಸ ಬಳಿಯ ಚೆಕ್ಪೋಸ್ಟ್್ಟಳಲ್ಲಿ ಈ ಸೇವೆ ಆರಂಭಿಸಿದ್ದು, ನಿತ್ಯ ಒಂದೊಂದು ಚೆಕ್ಪೋಸ್ಟ್ಗಳಲ್ಲಿ 200 ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸೇವೆ ಲಾಕ್ಡೌನ್ ಮುಗಿಯುವವರೆಗೆ ಮುಂದುವರಿಯಲಿದೆ.
ಇದಲ್ಲದೆ, ಜಿಲ್ಲೆಯ ಗಡಿಭಾಗ ದಾಟಿ ಬರುತ್ತಿರುವ ಭಿಕ್ಷುಕರಿಗೆ ಸಹ ಊಟದ ವ್ಯವಸ್ಥೆ ಮಾಡಿ, ಮಾಸ್ಕ್ ವಿತರಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಬಾಗಳು ಬಂದ್ ಆಗಿದ್ದರಿಂದ ಲಾರಿ ಚಾಲಕರಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಅಗತ್ಯ ವಸ್ತುಗಳ ಸಾಗಣೆ ಮಾಡುತ್ತಿದ್ದ ಲಾರಿ ಚಾಲಕರಿಗೆ ಚೆಕ್ಪೋಸ್ಟ್ಗಳಲ್ಲೇ ಆಹಾರದ ಕಿಟ್ಗಳನ್ನು ನಿರಂತರವಾಗಿ ನೀಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
4.82 ಲಕ್ಷ ಟನ್ ಅಗತ್ಯ ವಸ್ತು ಸಾಗಿಸಿದ ನೈಋತ್ಯ ರೈಲ್ವೆ: ಲಾಕ್ಡೌನ್ ಘೋಷಣೆ ಮಧ್ಯೆಯೂ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ನೈಋತ್ಯ ರೈಲ್ವೆ ವಲಯ ನಿರತವಾಗಿದೆ. ಮಾ. 27 ರಿಂದ ಏ. 3ರವರೆಗೆ ನೈಋತ್ಯ ರೈಲ್ವ ವಲಯ ಅಕ್ಕಿ, ಗೋದಿ, ಟೊಮ್ಯಾಟೊ, ಭತ್ತ, ಕಲ್ಲಿದ್ದಿಲು, ಪೆಟ್ರೋಲಿಯಂ ಉತ್ಪಾದನೆಗಳು, ಎಲ್ಪಿಜಿ, ಸ್ಟೀಲ್, ಸಿಮೆಂಟ್ ಸೇರಿ 4,82,540 ಟನ್ಗಳಷ್ಟು ಅಗತ್ಯ ವಸ್ತುಗಳನ್ನು 153 ಗೂಡ್ಸ್ ರೈಲುಗಳ ಮೂಲಕ ವಿವಿಧೆಡೆ ಸಾಗಿಸಿದೆ. 2,15,877 ಅಗತ್ಯ ವಸ್ತುಗಳನ್ನು 69 ರೈಲುಗಳಲ್ಲಿ ಭರ್ತಿ ಮಾಡಲಾಗಿದೆ. ಬೆಂಗಳೂರು ರೈಲ್ವೆ ವಿಭಾಗದಲ್ಲಿ 35 ರೈಲುಗಳ ಮೂಲಕ 92, 500 ಟನ್, ಮೈಸೂರು ವಿಭಾಗದಲ್ಲಿ 20 ರೈಲುಗಳ ಮೂಲಕ 57,340 ಟನ್, ಹುಬ್ಬಳ್ಳಿ ವಿಭಾಗದಲ್ಲಿ 98 ರೈಲುಗಳ ಮೂಲಕ 3,32,700 ಟನ್ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ.