

ಶತಮಾನೋತ್ಸವ ಕಂಡಿರುವ ಮೈಸೂರು ವಿಶ್ವವಿದ್ಯಾಲಯದ ಲಾಂಛನದಲ್ಲಿ ಕನ್ನಡ ಸೇರ್ಪಡೆಗೆ ನಿರಾಕರಣೆ ಮಾಡಲಾಗಿದೆ. ಸಂಸ್ಕೃತ ಭಾಷೆ ಒಳಗೊಂಡಿರುವ ಹಳೇ ಲೋಗೋವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ.
ಈ ಹಿಂದಿನಿಂದ ಬಂದಿರುವ ಲಾಂಛನ ಪರಿಷ್ಕರಣೆ ಮಾಡಲು ಹಿಂದೇಟು ಹಾಕಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಉಳಿಸಿಕೊಂಡು ಹೋಗಲು ಮೈಸೂರು ವಿವಿ ನಿಶ್ಚಯಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಲಾಂಭನದಲ್ಲಿ ಕನ್ನಡ ಭಾಷೆ ಇಲ್ಲದಿರುವ ಕುರಿತು ಚರ್ಚೆ ಮಾಡಿದ್ದರು. ಜತೆಗೆ, ಕನ್ನಡ ಭಾಷೆಯನ್ನು ಲೋಗೋದಲ್ಲಿ ಸೇರಿಸುವ ಮೂಲಕ ಕನ್ನಡಮಯಗೊಳಿಸಬೇಕು ಎಂದು ಸೂಚಿಸಿದ್ದರು.
ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ತಿಳಿಸಿದ್ದರು. ಈ ಸಲಹೆಯನ್ನು ಮೈಸೂರು ವಿವಿ ತಿರಸ್ಕರಿಸಿದೆ.
ಈ ವಿಷಯ ಕುರಿತು ಇತ್ತೀಚೆಗೆ ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚಿಸಲಾಗಿದೆ. ಅಂತಿಮವಾಗಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿಲ್ಲ. ಬದಲಿಗೆ ಪ್ರಸ್ತುತ ಇರುವ ಲಾಂಛನವನ್ನು ಯಥಾಸ್ಥಿತಿಯಲ್ಲೇ ಕಾಯ್ದುಕೊಳ್ಳಲು ಒಮ್ಮತದ ನಿರ್ಣಯಕ್ಕೆ ಬರಲಾಗಿದೆ. ಈ ಕುರಿತು ಸರ್ಕಾರಕ್ಕೆ ವಿವರ ಸಲ್ಲಿಸಲು ಅನುಮೋದಿಸಲಾಗಿದೆ. ಇದರೊಂದಿಗೆ ಪುರುಷೋತ್ತಮ ಬಿಳಿಮಲೆ ಅವರ ಪ್ರಸ್ತಾವನೆ ಬಿದ್ದು ಹೋಗಿದೆ.
ಮೈಸೂರು ವಿವಿಯೊಂದಿಗೆ ಅದರ ಚಿಹ್ನೆಗೂ ಅಷ್ಟೇ ಐತಿಹಾಸ, ಹಿನ್ನೆಲೆ ಇದೆ. ಇದು ವಿವಿಯ ಹೆಗ್ಗುರುತು. ಈ ಕಾರಣಕ್ಕೆ ಹಿಂದಿನಿಂದ ಇರುವ ಲಾಂಛನದ ಪರಿಷ್ಕರಣೆಗೆ ಮೈವಿವಿ ಸುತಾರಾಂ ಒಪ್ಪಿಲ್ಲ.
ಮೈಸೂರು ವಿಶ್ವವಿದ್ಯಾಲಯದ ಲೋಗೋದಲ್ಲಿ ಎರಡೂ ಕಡೆಯೂ ಆವೃತವಾಗಿರುವ ಗಂಡಭೇರುಂಡಗಳ ಚಿತ್ರವಿದೆ. ಇದನ್ನು ಮೈಸೂರು ರಾಜಮನೆತನದ ಲಾಂಛನದಿಂದ ಸ್ವೀಕರಿಸಲಾಗಿದೆ. ಇವು ಸಿಂಹ ಮತ್ತು ಆನೆಗಳಿಗಿಂತಲೂ ಬಲಿಷ್ಠವಾಗಿವೆ ಎಂದು ನಂಬಲಾಗಿದ್ದು, ಸಿಂಹದಿಂದ ಸುತ್ತುವರಿಯಲ್ಪಟ್ಟಿದೆ. ಇವು ನ್ಯಾಯವನ್ನು ಎತ್ತಿಹಿಡಿಯುವುದಾಗಿವೆ ಎಂಬುದನ್ನು ಸಂಕೇತಿಸುತ್ತವೆ.
ಲಾಂಛನದ ಮೇಲ್ಭಾಗದಲ್ಲಿ ‘ನಹಿ ಜ್ಞಾನೇನ ಸದೃಶಂ’ ಎಂಬ ಸಂಸ್ಕೃತ ಪದ ಇದೆ. ಇದು ‘ಜ್ಞಾನಕ್ಕಿಂತ ಸಮನಾದುದಿಲ್ಲ’ ಎಂದು ಅರ್ಥೈಸುತ್ತದೆ. ಈ ಸಂಸ್ಕೃತ ಪದದ ಸಾಲನ್ನು ಭಗವದ್ಗೀತೆಯಿಂದ ತೆಗೆದುಕೊಳ್ಳಲಾಗಿದೆ.
‘ಸತ್ಯಮೇವೋದ್ಧಾರಹಮ್ಯಹಂ’ ಎಂಬ ಮತ್ತೊಂದು ಸಂಸ್ಕೃತ ಪದ ಸಹ ಇದೆ. ಸತ್ಯಕ್ಕೆ ಅಂಟಿಕೊಳ್ಳುವುದೇ ಉನ್ನತವಾದದ್ದು ಎಂಬ ಆದರ್ಶವನ್ನು ಪ್ರತಿಪಾದಿಸುತ್ತದೆ. ಇದುವೇ ವಿಶ್ವವಿದ್ಯಾಲಯದ ಗುರಿಯಾಗಿದ್ದು, ಇದನ್ನು ಲಾಂಛನದಲ್ಲಿ ಕೆತ್ತಲಾಗಿದೆ. ಈ ಸಾಲು ಯಾವಾಗಲೂ ವಿಶ್ವವಿದ್ಯಾಲಯ ಮತ್ತು ಸ್ಥಾಪಕರ ಕೆಲಸ ಮತ್ತು ಆದರ್ಶವನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಪ್ರತಿಪಾದಿಸುತ್ತದೆ ಎಂದು ಮೈಸೂರು ವಿವಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರು ಇಡಬೇಕು ಎಂಬ ಪ್ರಸ್ತಾವನೆಯನ್ನೂ ಈ ಹಿಂದೆ ತಿರಸ್ಕರಿಸಲಾಗಿತ್ತು. ಶಿವಮೊಗ್ಗ, ವಿಜಯಪುರ ವಿಶ್ವವಿದ್ಯಾಲಯಗಳ ಹೆಸರಿನ ಮರುನಾಮಕರಣ ಮಾಡಿದಂತೆ ಮೈವಿವಿ ಹೆಸರನ್ನೂ ಪರಿಷ್ಕರಣೆ ಮಾಡಬೇಕು ಎಂಬ ಆಗ್ರಹ ಇತ್ತು.
ಮುಖ್ಯ ಕ್ಯಾಂಪಸ್ ಆಗಿರುವ 739 ಎಕರೆ ವಿಸ್ತಾರದ ಮಾನಸಗಂಗೋತ್ರಿಯ ಪ್ರವೇಶ ದ್ವಾರದಲ್ಲಿ ವಿವಿಯ ಘೋಷವಾಕ್ಯ ರಾರಾಜಿಸುತ್ತಿದೆ. ‘ನಹಿ ಜ್ಞಾನೇನ ಸದೃಶಂ’ ಮತ್ತು ‘ಸತ್ಯಮೇವೋದ್ಧಾರಹಮ್ಯಹಂ’ ಎಂಬ ಘೋಷ ವಾಕ್ಯದ ಪ್ರತ್ಯೇಕ ಫಲಕಗಳು ತ್ರಿಭಾಷಾದಲ್ಲಿ ಇದೆ. ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ. ಈ ಫಲಕಗಳು ಎದುರು-ಬದುರಾಗಿವೆ. ಈ ಬೋರ್ಡ್‌ಗೆ ದೀಪಾಲಂಕಾರ ಮಾಡಲಾಗಿದೆ. ಕ್ಯಾಂಪಸ್ ಪ್ರವೇಶಿಸುವ ವಿದ್ಯಾರ್ಥಿಗಳು, ಬೋಗಾದಿ ರಸ್ತೆಯಲ್ಲಿ ಸಾಗುವ ಹಾದಿಹೋಕರನ್ನು ಇದು ಆಕರ್ಷಿಸುತ್ತದೆ.
ಮೈಸೂರು ವಿಶ್ವವಿದ್ಯಾಲಯ ಲಾಂಛನದಲ್ಲಿ ಕನ್ನಡ ಪದ ಸೇರ್ಪಡೆಗೆ ಈ ಹಿಂದೆ ಪ್ರಸ್ತಾವನೆ ಬಂದಿತ್ತು. ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅದನ್ನು ತಿರಸ್ಕರಿಸಲಾಗಿದ್ದು, ಲೋಗೋವನ್ನು ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ. ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ ಮೈಸೂರು ವಿಶ್ವವಿದ್ಯಾಲಯ