ಲಾಂಚ್ ಸಂಪರ್ಕ ರಸ್ತೆ ಕೆಸರುಮಯ

30kgl02
ಹಲವು ಗ್ರಾಮಗಳ ಸಂಪರ್ಕಕ್ಕೆ ಆಸರೆಯಾಗಿರುವ ಮುಪ್ಪಾನೆ ಜಲಸಾರಿಗೆ ಲಾಂಚ್.
Published on

ರಾಧಕೃಷ್ಣ ಕಾರ್ಗಲ್

ಕರೂರು ಮತ್ತು ಭಾರಂಗಿ ಹೋಬಳಿಗಳ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರ ಮಾರ್ಗದ ಹಲ್ಕೆ ಹಾಗೂ ಮುಪ್ಪಾನೆ ನಡುವೆ ಸಂಚರಿಸುವ ಲಾಂಚ್ ಇರುವ ಸ್ಥಳ ತಲುಪುವ ರಸ್ತೆ ದುರವಸ್ಥೆ ತಲುಪಿದೆ. ಮಳೆಗಾಲದ ಸಂದರ್ಭ ಕೆಸರಿನಲ್ಲಿ ವಾಹನಗಳ ಚಕ್ರಗಳು ಹೂತು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಮುಪ್ಪಾನೆ ತಿರುವಿನಿಂದ ಲಾಂಚ್ ತಲುಪುವ ಒಂದು ಬದಿ ಮಾತ್ರವಲ್ಲದೆ, ಎರಡು ಬದಿಗಳಲ್ಲೂ ರಸ್ತೆ ಹಾಳಾಗಿ ಓಡಾಟಕ್ಕೆ ತೊಂದರೆ ಉಂಟಾಗಿದೆ. ಜೋಗ-ಭಟ್ಕಳ ಹೆದ್ದಾರಿಯ ಮುಖ್ಯರಸ್ತೆಯ ಮುಪ್ಪಾನೆ ತಿರುವಿನಿಂದ ಸುಮಾರು 3 ಕಿ.ಮೀ.ವರೆಗೆ ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಹಾದುಹೋಗುವ ಈ ಮಾರ್ಗದ ಸಂಚಾರ ಬಹಳ ಕಠಿಣವಾಗಿದೆ.

ಮಳೆಗಾಲ ಆರಂಭವಾದರೆ ವಾಹನಗಳು ಸಿಲುಕಿಕೊಳ್ಳುತ್ತವೆ. ಈ ಮಾರ್ಗವು ಮಣ್ಣಿನ ರಸ್ತೆಯಾದ್ದರಿಂದ ವಾಹನ ಚಲಾಯಿಸಿಕೊಂಡು ಇಲ್ಲಿಗೆ ತಲುಪುವುದು ಹಾಗೂ ಬೋಟಿನಿಂದ ವಾಪಸ್ ತೆರಳುವುದು ಸವಾಲಿನ ಕೆಲಸವೇ ಸರಿ. ಪ್ರವಾಸಿ ವಾಹನಗಳು ತೆರಳುವಾಗ ಮಣ್ಣಿನಲ್ಲಿ ಹೂತು, ನಂತರ ಸ್ಥಳೀಯರ ನೆರವಿನೊಂದಿಗೆ ವಾಹನಗಳನ್ನು ಎಳೆದು ತರಲಾಗುತ್ತಿದೆ.

ರಸ್ತೆ ಸಮಸ್ಯೆಯಿಂದ ನಾಲ್ಕು ಚಕ್ರದ ವಾಹನಗಳು ಇದೀಗ ಲಾಂಚ್‌ನಲ್ಲಿ ಸಂಚರಿಸುತ್ತಿಲ್ಲ. ಬೈಕ್‌ಗಳನ್ನು ಮಾತ್ರ ಸಾಗಿಸಲಾಗುತ್ತಿದೆ. ದ್ವಿಚಕ್ರ ವಾಹನಗಳು ಲಾಂಚ್‌ಗೆ ತೆರಳಲು ಅಗತ್ಯವಿರುವ ರಸ್ತೆ ಹಾಳಾಗಿದ್ದ, ತುರ್ತಾಗಿ ರಸ್ತೆ ಸರಿಪಡಿಸಬೇಕಿದೆ.

ದುರಸ್ತಿಗೆ ಸೂಚನೆ

ಮುಪ್ಪಾನೆ ಲಾಂಚ್ ದಡಕ್ಕೆ ಸಂಚರಿಸುವ ರಸ್ತೆ ಮಾರ್ಗವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪಿಡಬ್ಲು ್ಯಡಿ ಅಕಾರಿಗಳು ಸರಿಪಡಿಸಬೇಕು. ಈಗಾಗಲೇ ನಮ್ಮ ಇಲಾಖೆಯಿಂದ ಅರಳಗೋಡು ಪಿಡಿಒ ಅವರನ್ನು ಸಂಪರ್ಕಿಸಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ದುರಸ್ತಿಗೊಳಿಸಲು ತಿಳಿಸಲಾಗಿದೆ. ಹಲ್ಕೆ ಬಳಿ ದಾಟಲು ಬರುವ ವಾಹನಗಳಿಗೆ ನಮ್ಮ ಲಾಂಚ್ ಸಿಬ್ಬಂದಿಯೇ ವಾಪಸ್ ತೆರಳುವಂತೆ ಮಾಹಿತಿ ನೀಡುತ್ತಿದ್ದಾರೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಿರೀಕ್ಷಕ ಧನೇಂದ್ರಕುಮಾರ್ ತಿಳಿಸಿದ್ದಾರೆ.

7 ಕಿ.ಮೀ. ಹಿಂದಿರುಗುವ ಸ್ಥಿತಿ

ಹಲ್ಕೆ ಮತ್ತು ಮುಪ್ಪಾನೆ ಲಾಂಚ್‌ನ ಸಂಚಾರ ಮಾರ್ಗ ಮಳೆಯಿಂದ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ತೊಡಕ್ಕಾಗಿದೆ. ಈ ಮಾರ್ಗದಲ್ಲಿ ಯಾವುದೇ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕರೂರು ಹೋಬಳಿಯ ತುಮರಿ ಕಡೆಯಿಂದ ಹಲ್ಕೆ ದಡದ ಮೂಲಕ ಕಾರ್ಗಲ್ ಬದಿಗೆ ಮಾಹಿತಿ ಇಲ್ಲದೆ ಬರುವವರಿಗೆ ರಸ್ತೆ ಮಾರ್ಗ ಸರಿ ಇಲ್ಲವೆಂದು ಬೋಟ್‌ನವರು ತಿಳಿಸುತ್ತಿದ್ದಾರೆ. ಇದರಿಂದ ಮಾರಳಗೋಡಿನಿಂದ 7 ಕಿ.ಮೀ. ಮುಂದೆ ಬಂದವರು ಹಾಗೆಯೇ ಹಿಂದಿರುಗುವಂತಾಗಿದೆ. ಮುಪ್ಪಾನೆ ಕಡೆಯಿಂದ ತೆರಳುವವರಿಗೆ ಮಾಹಿತಿ ಸಿಗದಿರುವುದರಿಂದ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಸ್ಥಳೀಯರು ತಾತ್ಕಾಲಿಕವಾಗಿ ಬೇಲಿ ಹಾಕಿದ್ದಾರೆ.

ಹಲವು ಗ್ರಾಮಕ್ಕೆ ಸಂಪರ್ಕ ಸಿಗಂದೂರು ದೇವಾಸ್ಥಾನ, ಕೊಲ್ಲೂರ ಮೂಕಾಂಬಿಕೆ ದೇಗುಲ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೂ ಲಾಂಚ್ ಮಾರ್ಗ ದಾರಿಯಾಗಿದೆ. ಮಾಹಿತಿಯೇ ಇರದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಈ ಮಾರ್ಗದಲ್ಲಿ ಪ್ರಯಾಣವನ್ನು ಬೆಳೆಸಿ ಅರಣ್ಯದ ಈ ದಾರಿಯಲ್ಲಿ ಸಿಲುಕುವಂತಾಗಿದೆ. ದಿನ ಬೆಳಗಾದರೆ ಹತ್ತು ಹಲವು ವಾಹನಗಳು ಸಿಲುಕಿಕೊಳ್ಳುತ್ತಲೇ ಇರುತ್ತವೆ. ಹೆಚ್ಚು ಮಳೆಯಾದರೆ ಪ್ರವಾಸಿ ಟೆಂಪೋ ಟ್ರಾವೆಲರ್, ಕಾರು ಸೇರಿ ಹಲವು ವಾಹನಗಳು ರಸ್ತೆಯಲ್ಲಿ ಹೂತು ಪರದಾಡಿ, ಕೊನೆಗೆ ಗ್ರಾಮಸ್ಥರು ಜೆಸಿಬಿ ತರಿಸಿ ಎಳೆದು ತಂದ ಘಟನೆಗಳು ನಡೆದಿವೆ.

ಹೆಚ್ಚಾಗಲಿದೆ ಪ್ರಯಾಣಿಕರ ಸಂಖ್ಯೆ ಶರಾವತಿ ಕಣಿವೆಯ ಕಾರ್ಗಲ್ ಪ್ರದೇಶದಿಂದ ಲಿಂಗನಮಕ್ಕಿ ಜಲಾಶಯದ ಹಿನ್ನೀರನ್ನು ಸುತ್ತಿ ಸಿಗಂದೂರು ದೇವಾಲಯಕ್ಕೆ ಹೋಗಬೇಕಾದರೆ 80 ಕಿ.ಮೀ ಕ್ರಮಿಸಬೇಕು. ಆದರೆ ಈ ಲಾಂಚ್ ಮೂಲಕ ಸಂಚರಿಸಿದರೆ ಕೇವಲ 25 ಕಿ.ಮೀ ದೂರವಾಗುತ್ತದೆ. ಆದ್ದರಿಂದಲೇ ಈ ಪ್ರಯಾಣ ಪ್ರಾಮುಖ್ಯತೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಾಗರ ಆವಿನಹಳ್ಳಿ ಮಾರ್ಗದ ಸಿಗಂದೂರು ದೇವಸ್ಥಾನ ತಲುಪಲು ಸೇತುವೆ ನಿರ್ಮಾಣವಾದ್ದರಿಂದ ಲಾಂಚ್ ಪ್ರಯಾಣ ಅಂತ್ಯಗೊಳ್ಳಲಿದೆ. ಹಾಗಾಗಿ ಈ ಭಾಗದಲ್ಲಿ ಲಾಂಚ್ ಪ್ರಯಾಣಕ್ಕೆ ಪ್ರವಾಸಿಗರ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಹಾಲಿ ಸಂಚರಿಸುತ್ತಿರುವ ಲಾಂಚ್ ಎರಡು ಕಾರು ಹಾಗೂ ದ್ವಿಚಕ್ರ ವಾಹನದ ಜತೆಗೆ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಮೂವರು ನಿರ್ವಾಹಕರಿದ್ದಾರೆ. ರಾಜ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಿರ್ವಹಿಸುತ್ತಿದೆ. ಇದು ಅರಳಗೋಡು ಗ್ರಾಪಂ ವ್ಯಾಪ್ತಿಯ ಸರಹದ್ದಿನಲ್ಲಿದೆ. ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಣ್ಣ ಪುಟ್ಟ ದುರಸ್ತಿ ಕಾರ್ಯವನ್ನು ಪಂಚಾಯಿತಿಯಿಂದ ಮಾಡಲಾಗಿದೆ. ಕಾಂಕ್ರೀಟ್ ಅಥವಾ ಡಾಂಬರು ರಸ್ತೆ ನಿರ್ಮಾಣಕ್ಕೆ ನಮಗೆ ಅನುದಾನದ ಕೊರತೆ ಇದೆ. ಅದರಲ್ಲೂ ಇದು ಅಭಯಾರಣ್ಯವಾದ್ದರಿಂದ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಕಾನೂನು ತಕರಾರು ಕೂಡ ಇದೆ. ಹಾಗಾಗಿ ಸಮಸ್ಯೆ ಬಗೆಹರಿಸಲು ಕ್ಷೇತ್ರದ ಶಾಸಕರು ಮಾತ್ರ ಶಾಶ್ವತ ಪರಿಹಾರ ಒದಗಿಸಲು ಸಾಧ್ಯ. ರಾಜೇಶ್ ಯಲಕೋಡು, ಅರಳಗೋಡು ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net