

ಚಿತ್ರದುರ್ಗ: ವಿವಿಧ ರೋಗಗಳ ವಿರುದ್ಧ ಕಾಲ ಕಾಲಕ್ಕೆ ಕೊಡಿಸುವ ಲಸಿಕೆಗಳು ಮಕ್ಕಳ ಪ್ರಾಣವನ್ನು ರಕ್ಷಿಸುತ್ತವೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್ ಹೇಳಿದರು.
ನಗರದ ಮಠದ ಕುರುಬರಹಟ್ಟಿ ಮತ್ತು ಮೆದೇಹಳ್ಳಿ ಗ್ರಾಪಂಗಳಲ್ಲಿ ಸೋಮವಾರ ಗ್ರಾಮ ಆರೋಗ್ಯ ಯೋಜನೆ, ತರಬೇತಿ ಕಾರ್ಯಾಗಾರದಲ್ಲಿ ವಿಶ್ವ ಲಸಿಕಾ ದಿನ, ಅಯೋಡಿನ್‌ಯುಕ್ತ ಉಪ್ಪಿನ ಉಪಯೋಗದ ಕುರಿತು ಏರ್ಪಡಿಸಿದ್ದ ಮಾಹಿತಿ ಶಿಕ್ಷಣ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ಮಟ್ಟದಲ್ಲಿ ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಆರೋಗ್ಯ ಸಮಸ್ಯೆಗಳು, ತಾಯಿ ಮರಣ, ಶಿಶುಮರಣ ನಿಯಂತ್ರಿಸುವ, ಅಪೌಷ್ಟಿಕತೆ ನಿವಾರಣೆ ಕುರಿತಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳಿಗೆ ತಪ್ಪದೇ 12 ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ಕಾಲಕಾಲಕ್ಕೆ ಕೊಡಿಸಬೇಕೆಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿದರು. ಮಠದ ಕುರುಬರಹಟ್ಟಿ ಗ್ರಾಪಂ ಉಪಾಧ್ಯಕ್ಷೆ ವೀರಮ್ಮ, ಸದಸ್ಯರಾದ ಹನುಮಂತಪ್ಪ, ನಾಗರತ್ನಮ್ಮ, ಮಲ್ಲಿಕಾರ್ಜುನ, ಕಾರ್ಯದರ್ಶಿ ಚನ್ನವೀರಪ್ಪ, ಆರೋಗ್ಯ ಸುರಕ್ಷತಾ ಅಧಿಕಾರಿ ಶಿಲ್ಪಾ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಸಮುದಾಯ ಆರೋಗ್ಯ ಅಧಿಕಾರಿ ಜಯಲತಾ ಮತ್ತಿತರರು ಇದ್ದರು.
...