ಲಸಿಕೆ ಹಾಕಿಸಿ ಕಾಲುಬಾಯಿ ರೋಗದಿಂದ ಹಸುಗಳನ್ನು ರಕ್ಷಿಸಿ

Published on

ಗುಂಡ್ಲುಪೇಟೆ: ರೈತರು ತಮ್ಮ ಹಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ರೋಗದಿಂದ ರಕ್ಷಣೆ ಪಡೆದುಕೊಳ್ಳಬೇಕು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್‌ಕುಮಾರ್ ತಿಳಿಸಿದರು.

ಸೋಮವಾರ ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿ ಆವರಣದಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲು ಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಶುವೈದ್ಯ ಇಲಾಖೆಯಿಂದ ಪ್ರತಿ ಆರು ತಿಂಗಳಿಗೆ ಒಮ್ಮೆ ಲಸಿಕೆಗಳನ್ನು ಉಚಿತವಾಗಿ ಹಾಕಲಾಗುತ್ತಿದೆ. ಆದ್ದರಿಂದ ರೈತರು ತಮ್ಮ ಎಮ್ಮೆ, ಹಸು, ಎತ್ತುಗಳು ಸೇರಿದಂತೆ ಮೂರು ತಿಂಗಳು ದಾಟಿದ ಕರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಹಾಲು ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ಭಾವನೆಯಿಂದ ಹಲವಾರು ರೈತರು ಲಸಿಕೆ ಹಾಕಿಸಲು ಹಿಂಜರಿಯುವುದರಿಂದ ಅಂತಹ ರಾಸುಗಳಿಗೆ ಸೋಂಕು ತಗುಲುವ ಸಂಭವವಿದೆ. ತಾಲೂಕಿನಾದ್ಯಂತ ಅ.21ರಿಂದ ನವೆಂಬರ್ ತಿಂಗಳವರೆಗೆ ಲಸಿಕಾ ಅಭಿಯಾನ ನಡೆಯಲಿದೆ. ರೈತರು ಇಲಾಖೆಯ ಪಶುವೈದ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪುರಸಭಾ ಅಧ್ಯಕ್ಷ ಜಿ.ಎಸ್.ಕಿರಣ್‌ಗೌಡ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಪಶುವೈದ್ಯರಾದ ಡಾ.ನಾಗೇಂದ್ರ, ಕೃಷ್ಣ, ರಾಜೇಂದ್ರ ಪ್ರಸಾದ್ ಹಾಗೂ ಪಶುಸಖಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net