

ಬಾಗೇಪಲ್ಲಿ: ಕರೊನಾ ಲಸಿಕೆ ಹಾಕಲು ಜಿಲ್ಲಾಧಿಕಾರಿಯನ್ನೊಳಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭೇಟಿ ನೀಡುವ ಮಾಹಿತಿ ತಿಳಿದ ಕೆಲ ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಅಜ್ಞಾತವಾದ ಹಾಗೂ ಮನೆಯಿಂದ ಹೊರಬಾರದ ಪ್ರಸಂಗ ತಾಲೂಕಿನ ಸದ್ದಪಲ್ಲಿ ತಾಂಡಾದಲ್ಲಿ ನಡೆದಿದೆ.
ಲಸಿಕೆ ಕುರಿತು ಅಪನಂಬಿಕೆ, ಮೂಢನಂಬಿಕೆ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿ ಲತಾ, ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಗೂಳೂರು ಹೋಬಳಿ ಸದ್ದಪಲ್ಲಿ ತಾಂಡಾಕ್ಕೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯದಲ್ಲಿದ್ದರು. ಈ ವೇಳೆ ಅಧಿಕಾರಿಗಳನ್ನು ಕಂಡ ಕೆಲ ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಹೊರ ಹೋಗಿ ಅಡಗಿ ಕುಳಿತರೆ, ಇನ್ನು ಕೆಲವರು ಮನೆಯಿಂದ ಹೊರಬರಲಿಲ್ಲ.
ತಾಂಡಾದಲ್ಲಿ ಲಸಿಕಾ ಅಭಿಯಾನ ಅಯೋಜಿಸಿ ಮನೆ ಮನೆಗೂ ಭೇಟಿ ನೀಡಿ ಲಸಿಕೆ ಪ್ರಯೋಜನಗಳ ಕುರಿತು ಅರಿವು ಮೂಡಿಸಬೇಕು ಹಾಗೂ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ತಾಲೂಕುಮಟ್ಟದ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ ಎಂಬ ವದಂತಿಗಳನ್ನು ಬದಿಗೊತ್ತಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದರು. ತಾಪಂ ಇಒ ಎಚ್.ಎನ್.ಮಂಜುನಾಥ, ಕಂದಾಯ ವೃತ್ತ ನಿರೀಕ್ಷಕ ರಮೇಶ್, ಪಿಡಿಒ ನಾರಾಯಣಸ್ವಾಮಿ ಮತ್ತಿತರರು ಇದ್ದರು.