ಲಸಿಕಾಕರಣಕ್ಕೆ ಬೇಕು ಸಹಭಾಗಿತ್ವ  - ಡಿಸಿ ಡಾ.ವೆಂಕಟೇಶ್ ಸೂಚನೆ

dvg-dc-press-meet-28.jpg
Published on

ದಾವಣಗೆರೆ: ಉದ್ದೇಶಿತ ಮಿಷನ್ ಇಂದ್ರಧನುಷ್ ಲಸಿಕಾಕರಣಕ್ಕೆ ಆರೋಗ್ಯ ಇಲಾಖೆ ಜತೆ ಸಾರ್ವಜನಿಕರು ಸಹಕರಿಸಬೇಕು. ಇದರೊಂದಿಗೆ ದಾವಣಗೆರೆಯನ್ನು ದಡಾರ-ರುಬೆಲ್ಲಾ ರೋಗಮುಕ್ತ ಜಿಲ್ಲೆಯಾಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಿಷನ್ ಇಂದ್ರಧನುಷ್-5.0 ಅನುಷ್ಠಾನದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಗಸ್ಟ್ 7ರಿಂದ 12, ಸೆಪ್ಟೆಂಬರ್ 11ರಿಂದ 16, ಅಕ್ಟೋಬರ್ 9ರಿಂದ 14ರವರೆಗೆ ಒಟ್ಟು ಮೂರು ಹಂತದಲ್ಲಿ, ಐದು ವರ್ಷದೊಳಗಿನ ಮಕ್ಕಳಿಗಾಗಿ ಈ ಲಸಿಕಾಕರಣ ನಡೆಯಲಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಬಹಳ ಪ್ರಾಮುಖ್ಯವಾಗಿವೆ ಎಂದರು.

ನವಜಾತ ಶಿಶುವಿಗೆ 1 ವರ್ಷದೊಳಗಾಗಿ ಮಿಷನ್ ಇಂದ್ರಧನುಷ್ ಲಸಿಕೆ ಒಳಗೊಂಡು ಅಗತ್ಯ ಚುಚ್ಚುಮದ್ದುಗಳನ್ನು ನೀಡಬೇಕು. ಈ ಅವಧಿಯಲ್ಲಿ ಲಸಿಕೆ ಪ್ರಗತಿ ಕುಂಠಿತವಾದಲ್ಲಿ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆಯೂ ಸೂಚನೆ ನೀಡಿದರು.

ಈ ಹಿಂದೆ ಲಸಿಕೆಯಿಂದ ಬಿಟ್ಟು ಹೋದ ಮಕ್ಕಳು ಅಭಿಯಾನದಿಂದ ಹೊರಗುಳಿಯಬಾರದು. ತಾಲ್ಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸುವ ಮೂಲಕ ಲಸಿಕಾಕರಣ ಹಬ್ಬದೋಪಾದಿಯಲ್ಲಿ ನಡೆಸಬೇಕು. ದಡಾರ-ರುಬೆಲ್ಲಾದಿಂದ ಯಾವುದೇ ಮಗು ಮರಣ ಹೊಂದಬಾರದು ಎಂದು ಹೇಳಿದರು.

ಇಂದ್ರಧನುಷ್ ಲಸಿಕೆಯನ್ನು ಜಾತಿ, ಧರ್ಮಭೇದವಿಲ್ಲದೆ ಎಲ್ಲಾ ಮಕ್ಕಳಿಗೆ ಹಾಕಿಸಬೇಕು. ಸಮಸ್ಯೆ ಇರುವಲ್ಲಿ ಸಂಬಂಧಿಸಿದ ಮುಖಂಡರು, ಗುರುಗಳ ನೆರವನ್ನು ಪಡೆದು ಮನವರಿಕೆ ಮಾಡಿಕೊಡುವ ಮೂಲಕ ಲಸಿಕಾಕರಣ ಪ್ರಗತಿಗೆ ಮುಂದಾಗಬೇಕು. ಈ ದಿಸೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಎಸ್.ಮೀನಾಕ್ಷಿ ಮಾತನಾಡಿ ಜಿಲ್ಲೆಯಲ್ಲಿ 710 ಗರ್ಭಿಣಿಯರು, 2 ವರ್ಷದೊಳಗಿನ 3154, ಎರಡೂವರೆ ವರ್ಷದೊಳಗಿನ 170 ಮಕ್ಕಳಿದ್ದು, ಎಲ್ಲರಿಗೂ ಮಿಷನ್ ಇಂದ್ರಧನುಷ್ ಲಸಿಕೆ ಹಾಕಿಸಲು ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹಾಗೂ ಮೊಬೈಲ್ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಸುರೇಶ್ ಇಟ್ನಾಳ್, ಡಿಎಚ್‌ಒ ಡಾ.ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net